September 16, 2026
Wednesday, September 16, 2026
spot_img

ʼಸ್ವಲ್ಪ ಖರ್ಚು ಮಾಡಿದಿವಿ ಕ್ಷಮಿಸಿʼ ಎಂದು ಲೆಟರ್‌ ಬರೆದು ಹಣ, ಚಿನ್ನ ವಾಪಾಸ್‌ ಕೊಟ್ಟ ಕಳ್ಳರು!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕಳ್ಳರ ಗುಂಪೊಂದು ತಾವೇ ಕದ್ದ ಹಣ, ಚಿನ್ನಾಭರಣವನ್ನು ವಾಪಾಸ್‌ ನೀಡಿ ಜೊತೆಗೊಂದು ಕ್ಷಮಾಪಣ ಪತ್ರ ಇಟ್ಟ ಘಟನೆ ಆಂಧ್ರಪ್ರದೇಶದ ಕಾಕಿನಾಡ ಜಿಲ್ಲೆಯಲ್ಲಿ ನಡೆದಿದೆ. ಕರಪ ಮಂಡಲದ ರಾಮಕಂಚಿರಾಜು ನಗರದ ನಿವಾಸಿ ನಾಮಾಲ ಗಣೇಶ್‌ ಅವರ ಮನೆಯಲ್ಲಿ ಕಳ್ಳತನವಾಗಿತ್ತು. ಕದ್ದ ಹಣ ಹಾಗೂ ಬಂಗಾರವನ್ನು ಹದಿನೈದು ದಿನಗಳ ನಂತರ ಕಳ್ಳರು ವಾಪಾಸ್‌ ಮಾಡಿದ್ದಾರೆ.

ಊರಿಗೆ ಹೋದಾಗ ಕಳ್ಳತನ

ನಾಮಾಲ ಗಣೇಶ್‌ ತಮ್ಮ ಕುಟುಂಬದವರ ಜೊತೆ ಸ್ವಗ್ರಾಮಕ್ಕೆ ತೆರಳಿದ್ದಾರೆ. ಈ ಮನೆಯ ಮೇಲೆ ಕಣ್ಣಿಟ್ಟಿದ್ದ ಕಳ್ಳರ ಗ್ಯಾಂಗ್‌ ಮನೆಗೆ ಬೀಗ ಹಾಕಿದ್ದನ್ನು ನೋಡಿಕೊಂಡಿದ್ದಾರೆ. ಆನಂತರ ರಾತ್ರಿ ಬೀಗವನ್ನು ಒಡೆದು 6.50 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ 50,000 ರೂ. ನಗದು ದೋಚಿ ಪರಾರಿಯಾಗಿದ್ದರು. ಮನೆಗೆ ಬಂದು ನೋಡಿದ ಗಣೇಶ್‌ ಹಾಗೂ ಫ್ಯಾಮಿಲಿಗೆ ಆಘಾತವಾಗಿದ್ದು, ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

ನಮ್ಮದೇ ತಪ್ಪು, ದಯವಿಟ್ಟು ಕ್ಷಮಿಸಿ

ಇದಾಗಿ ಹದಿನೈದು ದಿನಗಳ ನಂತರ ಬೆಳಗಿನ ಜಾವ ಗಣೇಶ್‌ ಅವರ ಮನೆಯ ಅಂಗಳದಲ್ಲಿ ಕವರ್‌ ಒಂದು ಕಾಣಿಸಿದೆ. ಇದರಲ್ಲಿ ಕದ್ದಿದ್ದ ಚಿನ್ನಾಭರಣ ಹಾಗೂ ಹಣ ಇತ್ತು. ಜೊತೆಗೆ ಕೈಯಲ್ಲೇ ಬರೆದ ಕ್ಷಮಾಪಣಾ ಪತ್ರವೂ ಇತ್ತು. ನಾವು ಮಾಡಿದ್ದು ತಪ್ಪು ಎಂದು ಗೊತ್ತಿದೆ. ದಯವಿಟ್ಟು ಕ್ಷಮಿಸಿ ಎಂದು ಬರೆದಿದ್ದಾರೆ.

22,000 ರೂಪಾಯಿ ಖರ್ಚು ಮಾಡಿದ್ದೀವಿ

ನಿಮ್ಮ ಬಳಿ ಕದ್ದಿದ್ದ ಐವತ್ತು ಸಾವಿರ ರೂಪಾಯಿ ಹಣದಲ್ಲಿ 22,000 ರೂಪಾಯಿ ಖರ್ಚು ಮಾಡಿದ್ದೀವಿ. ಇದನ್ನು ಹಿಂದಿರುಗಿಸಲು ಆಗುವುದಿಲ್ಲ. ಉಳಿದ ಎಲ್ಲ ಬಂಗಾರ ಹಾಗೂ ಹಣ ಕವರ್‌ನಲ್ಲಿದೆ ಎಂದು ಪತ್ರದಲ್ಲಿ ಬರೆದಿದ್ದಾರೆ.

ಹೋದ ಹಣ ಹೋಯಿತು, ಆದರೆ ಲಕ್ಷಾಂತರ ಬೆಲೆಬಾಳುವ ಬಂಗಾರ ತಂದು ಕೊಟ್ಟಿದ್ದಾರಲ್ಲ ಎಂದು ಗಣೇಶ್‌ ಸಮಾಧಾನಿಸಿಕೊಂಡಿದ್ದಾರೆ. ಇಡೀ ಊರಿನಲ್ಲಿ ಈ ಘಟನೆಯದ್ದೇ ಮಾತುಕತೆ ನಡೆಯುತ್ತಿದ್ದು, ಪೊಲೀಸರು ಕಳ್ಳರನ್ನು ಹುಡುಕುತ್ತಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !