ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟ ಕಿಚ್ಚ ಸುದೀಪ್ ಮತ್ತು ನಿರ್ಮಾಪಕ ಎನ್. ಕುಮಾರ್ ನಡುವಿನ ಬಹುಚರ್ಚಿತ ಕಾನೂನು ಹೋರಾಟಕ್ಕೆ ಹೊಸ ತಿರುವು ಸಿಕ್ಕಿದೆ. 2023ರಲ್ಲಿ ಆರಂಭವಾದ ಮಾನನಷ್ಟ ಪ್ರಕರಣ ಸಂಬಂಧ ಸುದೀಪ್ ನಿನ್ನೆ ನ್ಯಾಯಾಲಯಕ್ಕೆ ಹಾಜರಾಗಿದ್ದು, ಕ್ರಾಸ್ ಎಕ್ಸಾಮಿನೇಷನ್ ಪ್ರಕ್ರಿಯೆ ನಡೆಯಿತು. ಈ ಪ್ರಕರಣವು ಮತ್ತೆ ಸ್ಯಾಂಡಲ್‌ವುಡ್‌ನಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಈ ವಿವಾದದ ಮೂಲ 2023ರಲ್ಲಿ ನಿರ್ಮಾಪಕರಿಂದ ಹೊರಬಂದ ಆರೋಪಗಳಲ್ಲಿದೆ. ಎಂ.ಎನ್. ಕುಮಾರ್ ಮತ್ತು ಎಂ.ಎನ್. ಸುರೇಶ್ ಅವರು, ಒಂದು ಸಿನಿಮಾಕ್ಕೆ ಕಾಲ್‌ಶೀಟ್ ನೀಡುವುದಾಗಿ ಹೇಳಿ ಸುದೀಪ್ ಮುಂಗಡ ಹಣ ಪಡೆದಿದ್ದಾರೆ ಎಂದು ಸಾರ್ವಜನಿಕವಾಗಿ ಆರೋಪಿಸಿದ್ದರು. ಈ ಆರೋಪಗಳು ವ್ಯಾಪಕವಾಗಿ ಹರಿದಾಡುತ್ತಿದ್ದಂತೆಯೇ, ಸುದೀಪ್ ಅದನ್ನು ತೀವ್ರವಾಗಿ ಖಂಡಿಸಿ ₹10 ಕೋಟಿ ಮಾನನಷ್ಟ ನೋಟಿಸ್ ಜಾರಿಗೊಳಿಸಿದ್ದರು.
ನೋಟಿಸ್‌ಗೆ ಸಮರ್ಪಕ ಉತ್ತರ ಸಿಗದ ಹಿನ್ನೆಲೆಯಲ್ಲಿ, ನಟನು ನಿರ್ಮಾಪಕರ ವಿರುದ್ಧ ಕ್ರಿಮಿನಲ್ ಮತ್ತು ಮಾನನಷ್ಟ ದೂರು ದಾಖಲಿಸಿದ್ದರು. ಬಳಿಕ ಬೆಂಗಳೂರಿನ ನ್ಯಾಯಾಲಯವು ನಿರ್ಮಾಪಕರಿಗೆ ಸುದೀಪ್ ಹಾಗೂ ಅವರ ಕುಟುಂಬದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡದಂತೆ ತಾತ್ಕಾಲಿಕ ನಿರ್ಬಂಧವನ್ನೂ ಹೇರಿತ್ತು.
ಇದನ್ನೂ ಓದಿ:
ನಿನ್ನೆ ಮಧ್ಯಾಹ್ನ ಸುಮಾರು 3 ಗಂಟೆಯ ಸುಮಾರಿಗೆ 7ನೇ ಎಸಿಜೆಎಂ ಕೋರ್ಟ್‌ಗೆ ಹಾಜರಾದ ಸುದೀಪ್, ನಿರ್ಮಾಪಕರ ಪರ ವಕೀಲರ ಪ್ರಶ್ನೆಗಳಿಗೆ ಉತ್ತರಿಸಿದರು. ವಿಚಾರಣೆ ಬಳಿಕ ನ್ಯಾಯಾಲಯವು ಮುಂದಿನ ದಿನಾಂಕವನ್ನು ಜೂನ್ 6ಕ್ಕೆ ಮುಂದೂಡಿದೆ.
ಈ ಪ್ರಕರಣ ಸುದೀಪ್ ಅವರ ವೃತ್ತಿಜೀವನದ ಇಮೇಜ್‌ಗೆ ಸಂಬಂಧಿಸಿದ್ದರಿಂದ ಸ್ಯಾಂಡಲ್‌ವುಡ್‌ನಲ್ಲಿ ಭಾರೀ ಕುತೂಹಲ ಮೂಡಿಸಿದೆ. ಮುಂದಿನ ವಿಚಾರಣೆಯಲ್ಲಿ ಏನಾಗಲಿದೆ ಎಂಬುದರತ್ತ ಎಲ್ಲರ ಗಮನ ನೆಟ್ಟಿದೆ.



