ಹೊಸದಿಗಂತ ಡಿಜಿಟಲ್ ಡೆಸ್ಕ್:
ತವರಿನ ಅಭಿಮಾನಿಗಳ ಕೂಗಾಟದ ನಡುವೆ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ಮತ್ತೊಮ್ಮೆ ತನ್ನ ಬಲವನ್ನು ಸಾಬೀತುಪಡಿಸಿದೆ. ಐಪಿಎಲ್ 2026ರ 11ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಕಣಕ್ಕಿಳಿದ ಬೆಂಗಳೂರು ತಂಡ, ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಮೇಲುಗೈ ಸಾಧಿಸಿ 43 ರನ್‌ಗಳ ಭರ್ಜರಿ ಜಯ ದಾಖಲಿಸಿತು. ಆರಂಭದಿಂದಲೇ ಆಕ್ರಮಣಕಾರಿ ಆಟವಾಡಿದ ಆರ್‌ಸಿಬಿ, ಸಿಎಸ್‌ಕೆಗೆ ಎಲ್ಲಿಯೂ ಹೋರಾಟಕ್ಕೆ ಅವಕಾಶ ನೀಡಲಿಲ್ಲ.
ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ 20 ಓವರ್‌ಗಳಲ್ಲಿ 250 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು. ವಿರಾಟ್ ಕೊಹ್ಲಿ 28 ರನ್‌ಗಳ ವೇಗದ ಇನ್ನಿಂಗ್ಸ್ ಆಡಿದರೆ, ಫಿಲ್ ಸಾಲ್ಟ್ 46 ರನ್‌ಗಳಿಂದ ಉತ್ತಮ ಅಡಿಪಾಯ ಹಾಕಿದರು. ನಂತರ ದೇವದತ್ ಪಡಿಕ್ಕಲ್ ಮತ್ತೊಮ್ಮೆ ಅರ್ಧಶತಕದೊಂದಿಗೆ ಮಿಂಚಿದರು. ಕೊನೆಯ ಓವರ್‌ಗಳಲ್ಲಿ ಟಿಮ್ ಡೇವಿಡ್ ಸ್ಫೋಟಕ ಬ್ಯಾಟಿಂಗ್ ನಡೆಸಿ ಕೇವಲ 25 ಎಸೆತಗಳಲ್ಲಿ 70 ರನ್ ಬಾರಿಸಿ ತಂಡದ ಮೊತ್ತವನ್ನು 250ಕ್ಕೆ ತಲುಪಿಸಿದರು.
ಇದನ್ನೂ ಓದಿ:
ಗುರಿ ಬೆನ್ನಟ್ಟಿದ ಸಿಎಸ್‌ಕೆ ಆರಂಭದಲ್ಲೇ ಒತ್ತಡಕ್ಕೆ ಸಿಲುಕಿತು. ನಾಯಕ ರುತುರಾಜ್ ಗಾಯಕ್ವಾಡ್ ಹಾಗೂ ಸಂಜು ಸ್ಯಾಮ್ಸನ್ ಬೇಗನೇ ವಿಕೆಟ್ ಒಪ್ಪಿಸಿದರು. ಸರ್ಫರಾಜ್ ಖಾನ್ ಅರ್ಧಶತಕದ ಮೂಲಕ ಹೋರಾಟ ತೋರಿದರೂ, ಉಳಿದ ಬ್ಯಾಟರ್‌ಗಳಿಂದ ನಿರೀಕ್ಷಿತ ಬೆಂಬಲ ಸಿಗಲಿಲ್ಲ.
ಆರ್‌ಸಿಬಿ ಪರ ಭುವನೇಶ್ವರ್ ಕುಮಾರ್ 3 ವಿಕೆಟ್ ಪಡೆದು ಮಿಂಚಿದರೆ, ಕೃನಾಲ್ ಪಾಂಡ್ಯ, ಡಫಿ ಮತ್ತು ಅಭಿನಂದನ್ ಸಿಂಗ್ ತಲಾ 2 ವಿಕೆಟ್ ಕಬಳಿಸಿದರು. ಅಂತಿಮವಾಗಿ ಚೆನ್ನೈ 207 ರನ್‌ಗಳಿಗೆ ಆಲೌಟ್ ಆಗಿ 43 ರನ್‌ಗಳ ಸೋಲು ಕಂಡಿತು.



