ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಾಗತಿಕ ರಾಜತಾಂತ್ರಿಕ ವಲಯದಲ್ಲಿ ಭಾರತದ ಕೀರ್ತಿ ಮತ್ತೊಮ್ಮೆ ಹೆಚ್ಚಾಗಿದ್ದು, ಇಸ್ರೇಲ್‌ನ ಸ್ವಾತಂತ್ರ್ಯ ದಿನಾಚರಣೆಯ ‘ಟಾರ್ಚ್ ಲೈಟಿಂಗ್’ ಸಮಾರಂಭದಲ್ಲಿ ಭಾಗವಹಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅಧಿಕೃತ ಆಹ್ವಾನ ನೀಡಿದ್ದಾರೆ.
ಇಸ್ರೇಲ್ ಪ್ರಧಾನಿಯವರ ಈ ಅಪರೂಪದ ಆಹ್ವಾನವನ್ನು ಪ್ರಧಾನಿ ಮೋದಿ ಆತ್ಮೀಯವಾಗಿ ಸ್ವೀಕರಿಸಿದ್ದು, ಉಭಯ ದೇಶಗಳ ನಡುವಿನ ದಶಕಗಳ ಹಳೆಯ ಸ್ನೇಹವನ್ನು ಕೊಂಡಾಡಿದ್ದಾರೆ.
ಭಾರತೀಯ ಪೈಲಟ್ ಜೊತೆಗೂಡಿ ದೀಪ ಬೆಳಗಲಿರುವ ಮೋದಿ
ಈ ಕುರಿತು ಸೋಷಿಯಲ್ ಮೀಡಿಯಾ ‘X’ ನಲ್ಲಿ ಹಂಚಿಕೊಂಡಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, “ನನ್ನ ಆತ್ಮೀಯ ಸ್ನೇಹಿತ, ಭಾರತದ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದೆ. ಇಸ್ರೇಲ್‌ನ ಸ್ವಾತಂತ್ರ್ಯ ದಿನದಂದು ಭಾರತದ ಧೈರ್ಯಶಾಲಿ ಪೈಲಟ್ ಸ್ಮಿತ್ ಮಚ್ಚಾರ್ ಅವರೊಂದಿಗೆ ಜಂಟಿಯಾಗಿ ಮಂಗಳ ದೀಪವನ್ನು ಬೆಳಗಿಸಲು ಅವರಿಗೆ ಆಹ್ವಾನ ನೀಡಿದ್ದೇನೆ” ಎಂದು ಬರೆದುಕೊಂಡಿದ್ದಾರೆ. ಇಸ್ರೇಲ್ ಇತಿಹಾಸದಲ್ಲಿ ಭಾರತದ ಪ್ರಧಾನಿಯೊಬ್ಬರಿಗೆ ಸಿಗುತ್ತಿರುವ ಅತ್ಯುನ್ನತ ಜಾಗತಿಕ ಗೌರವ ಇದಾಗಿದೆ.
ಭಯೋತ್ಪಾದನೆ ವಿರುದ್ಧ ಒಟ್ಟಾಗಿ ಹೋರಾಟ
ದೂರವಾಣಿ ಸಂಭಾಷಣೆಯ ವೇಳೆ ಭಯೋತ್ಪಾದನೆ ನಿಗ್ರಹದ ಬಗ್ಗೆ ಮಾತನಾಡಿದ ಪ್ರಧಾನಿ ಮೋದಿ, “ನೆಲ ಮತ್ತು ಆಗಸ ಎರಡರಲ್ಲೂ ಭಾರತ ಮತ್ತು ಇಸ್ರೇಲ್ ದೇಶಗಳು ಭಯೋತ್ಪಾದನೆಯ ವಿರುದ್ಧ ಜಂಟಿಯಾಗಿ ಹೋರಾಡುತ್ತಿವೆ” ಎಂದು ಇಸ್ರೇಲ್ ಪ್ರಧಾನಿಗೆ ಭರವಸೆ ನೀಡಿದ್ದಾರೆ. ಉಭಯ ದೇಶಗಳು ರಕ್ಷಣಾ ಮತ್ತು ತಾಂತ್ರಿಕ ವಲಯದಲ್ಲಿ ಹಂಚಿಕೊಂಡಿರುವ ಬದ್ಧತೆಯನ್ನು ಈ ಹೇಳಿಕೆ ಮತ್ತೊಮ್ಮೆ ಸಾಬೀತುಪಡಿಸಿದೆ.
ಪಶ್ಚಿಮ ಏಷ್ಯಾ ಶಾಂತಿಗೆ ಭಾರತದ ಒತ್ತು
ಮಾತುಕತೆಯ ನಂತರ ಪ್ರಧಾನಿ ನರೇಂದ್ರ ಮೋದಿ ಅವರೂ ಸಹ ‘X’ ನಲ್ಲಿ ಪೋಸ್ಟ್ ಮಾಡಿದ್ದು, “ಇಸ್ರೇಲ್ ಪ್ರಧಾನಿ ನೆತನ್ಯಾಹು ಅವರಿಂದ ಕರೆ ಬಂದಿತ್ತು. ನಮ್ಮ ದ್ವಿಪಕ್ಷೀಯ ಬಾಂಧವ್ಯದ ಪ್ರಗತಿಯನ್ನು ಪರಾಮರ್ಶಿಸಿದ ನಾವು, ಪಾಲುದಾರಿಕೆಯನ್ನು ಮತ್ತಷ್ಟು ಗಟ್ಟಿಗೊಳಿಸುವ ಭರವಸೆ ನೀಡಿದೆವು” ಎಂದಿದ್ದಾರೆ. ಇದೇ ವೇಳೆ, ಪ್ರಸ್ತುತ ಯುದ್ಧದ ಕಾರ್ಮೋಡ ಕವಿದಿರುವ ಪಶ್ಚಿಮ ಏಷ್ಯಾದ ಪ್ರಚಲಿತ ವಿದ್ಯಮಾನಗಳ ಕುರಿತು ಕಳವಳ ವ್ಯಕ್ತಪಡಿಸಿದ ಪ್ರಧಾನಿ ಮೋದಿ, ಈ ವಲಯದಲ್ಲಿ ತಕ್ಷಣವೇ ಯುದ್ಧ ನಿಲ್ಲಿಸಿ, ಶಾಂತಿ ಮತ್ತು ಸ್ಥಿರತೆಯನ್ನು ಮರುಸ್ಥಾಪಿಸುವ ತುರ್ತು ಅಗತ್ಯವಿದೆ ಎಂಬುದನ್ನು ನೆತನ್ಯಾಹು ಅವರಿಗೆ ಬಲವಾಗಿ ಮನವರಿಕೆ ಮಾಡಿಕೊಟ್ಟಿದ್ದಾರೆ.



