October 22, 2026
Thursday, October 22, 2026
spot_img

ಖಾಸಗಿ ಆಸ್ಪತ್ರೆಗಳ ಸುಲಿಗೆಗೆ ಆರೋಗ್ಯ ಇಲಾಖೆ ಬ್ರೇಕ್: ಇನ್ಮುಂದೆ ಔಷಧಿಗಳ ದರಪಟ್ಟಿ ಪ್ರದರ್ಶನ ಕಡ್ಡಾಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಖಾಸಗಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ವಿಧಿಸುವ ಅತಿಯಾದ ಚಿಕಿತ್ಸಾ ವೆಚ್ಚ ಹಾಗೂ ಔಷಧಿಗಳ ದರ ಸುಲಿಗೆಗೆ ಮುಕ್ತಿ ನೀಡಲು ರಾಜ್ಯ ಆರೋಗ್ಯ ಇಲಾಖೆ ಮಹತ್ವದ ನಿರ್ಧಾರ ಕೈಗೊಂಡಿದ್ದು, ಇನ್ಮುಂದೆ ಚಿಕಿತ್ಸಾ ದರಪಟ್ಟಿಯ ಜೊತೆಗೆ ಔಷಧಿಗಳ ದರಪಟ್ಟಿಯನ್ನೂ ಕಡ್ಡಾಯವಾಗಿ ಪ್ರದರ್ಶಿಸುವಂತೆ ಖಾಸಗಿ ಆಸ್ಪತ್ರೆಗಳಿಗೆ ಖಡಕ್ ಸೂಚನೆ ನೀಡಿದೆ.

ಬೆಂಗಳೂರಿನಲ್ಲಿ ಆರೋಗ್ಯ ಸಚಿವ ಯು.ಟಿ. ಖಾದರ್ ನೇತೃತ್ವದಲ್ಲಿ ನಡೆದ ಮಹತ್ವದ ಸಭೆಯಲ್ಲಿ, ರೋಗಿಗಳಿಗೆ ಹೊರೆಯಾಗದಂತೆ ಒಂದೇ ಕಾಯಿಲೆಗೆ ರಾಜ್ಯಾದ್ಯಂತ ಏಕರೂಪದ ಚಿಕಿತ್ಸಾ ದರವನ್ನು ಜಾರಿಗೆ ತರುವ ಕುರಿತು ಗಂಭೀರ ಚಿಂತನೆ ನಡೆಸಲಾಗಿದೆ.

ರೋಗ ಮತ್ತು ಸರ್ಜರಿಗಳಿಗೆ ಏಕರೂಪದ ದರ

ಖಾಸಗಿ ಆಸ್ಪತ್ರೆಗಳು ತಮ್ಮಲ್ಲಿರುವ ಐಸಿಯು, ಎಸಿ ರೂಮ್ ಹಾಗೂ ಜನರಲ್ ರೂಮ್‌ಗಳ ಸೌಲಭ್ಯಕ್ಕೆ ಅನುಗುಣವಾಗಿ ಪ್ರತ್ಯೇಕ ಸೇವಾ ಶುಲ್ಕವನ್ನು ನಿಗದಿಪಡಿಸಿಕೊಳ್ಳಲು ಸ್ವತಂತ್ರವಾಗಿವೆ. ಆದರೆ, ನಿರ್ದಿಷ್ಟ ರೋಗಗಳು ಹಾಗೂ ಶಸ್ತ್ರಚಿಕಿತ್ಸೆಗಳಿಗೆ ರಾಜ್ಯಾದ್ಯಂತ ಒಂದೇ ರೀತಿಯ ಏಕರೂಪದ ದರವನ್ನು ನಿಗದಿಪಡಿಸಬೇಕು ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ. ಒಂದೊಂದು ಊರಿನ ಆಸ್ಪತ್ರೆಗಳಲ್ಲಿ ಒಂದೊಂದು ರೀತಿಯ ರೇಟ್ ವಸೂಲಿ ಮಾಡುವುದಕ್ಕೆ ಇನ್ಮುಂದೆ ಬ್ರೇಕ್ ಬೀಳಲಿದೆ.

ಶೆಡ್ಯೂಲ್ಡ್ ಔಷಧಿಗಳ ದರ ಪ್ರದರ್ಶನ ಕಡ್ಡಾಯ

ವೈದ್ಯರ ಅಧಿಕೃತ ಪ್ರಿಸ್ಕ್ರಿಪ್ಷನ್ ಇಲ್ಲದೆ ಸಾರ್ವಜನಿಕರಿಗೆ ಮಾರಾಟ ಮಾಡಲು ಅನುಮತಿ ಇಲ್ಲದ ‘ಶೆಡ್ಯೂಲ್ಡ್ ಔಷಧಿಗಳ’ ಖರೀದಿ ದರ ಹಾಗೂ ಮಾರಾಟ ದರವನ್ನು ಆಸ್ಪತ್ರೆಯ ಬೋರ್ಡ್‌ನಲ್ಲಿ ಕಡ್ಡಾಯವಾಗಿ ಪ್ರದರ್ಶಿಸಬೇಕು ಎಂದು ಸರ್ಕಾರ ಆದೇಶಿಸಿದೆ. ಕ್ಯಾನ್ಸರ್ ಔಷಧಿಗಳ ದರ ಇಳಿಕೆಯ ಬೆನ್ನಲ್ಲೇ, ಈಗ ಕಿಡ್ನಿ ಹಾಗೂ ಹೃದಯ ಸಂಬಂಧಿ ಕಾಯಿಲೆಗಳ ತುರ್ತು ಔಷಧಿಗಳ ದರವನ್ನೂ ಗಣನೀಯವಾಗಿ ಕಡಿಮೆ ಮಾಡಲು ಇಲಾಖೆ ಮುಂದಾಗಿದೆ.

6 ತಿಂಗಳ ಕಾಲಾವಕಾಶ ನಿರಾಕರಿಸಿದ ಸಚಿವರು

“ಔಷಧಿಗಳ ಮೂಲ ದರ ನಮಗೆ ಕಂಪನಿಗಳಿಂದ ಬರುತ್ತದೆ. ಏಕಾಏಕಿ ದರ ಪ್ರದರ್ಶಿಸಲು ನಮ್ಮ ಕಂಪ್ಯೂಟರ್ ಸಾಫ್ಟ್‌ವೇರ್ ಅಪ್ಡೇಟ್ ಮಾಡಬೇಕಾಗುತ್ತದೆ. ಹೀಗಾಗಿ ಕನಿಷ್ಠ ಆರು ತಿಂಗಳು ಸಮಯಾವಕಾಶ ಕೊಡಿ” ಎಂದು ಖಾಸಗಿ ಆಸ್ಪತ್ರೆಗಳ ಒಕ್ಕೂಟ ಸಭೆಯಲ್ಲಿ ಮನವಿ ಮಾಡಿತು. ಆದರೆ ಇದಕ್ಕೆ ಒಪ್ಪದ ಸಚಿವ ಯು.ಟಿ. ಖಾದರ್, ಜನರ ಸಹನೆ ಕೈಮೀರಿ ಹೋಗುವ ಪರಿಸ್ಥಿತಿ ತರಬೇಡಿ, ಯಾರಿಗೂ ಮೋಸವಾಗಬಾರದು ಎಂದು ತಿಳಿಸಿ, ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕಾಲಾವಕಾಶದ ಬಗ್ಗೆ ಅಂತಿಮ ನಿರ್ಧಾರ ಪ್ರಕಟಿಸುವುದಾಗಿ ಹೇಳಿದರು.

ಇದನ್ನೂ ಓದಿ:

ಇನ್ಶೂರೆನ್ಸ್ ಕಂಪನಿಗಳ ಲೂಟಿಗೂ ಬೀಳಲಿದೆ ಮೂಗುದಾರ

ಆಸ್ಪತ್ರೆಗಳು ಹಾಗೂ ವಿಮಾ ಕಂಪನಿಗಳ ನಡುವೆ ನಡೆಯುತ್ತಿರುವ ಬಿಲ್ಲಿಂಗ್ ಅಕ್ರಮದ ಬಗ್ಗೆ ಸಚಿವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. “ಒಂದು ಲಕ್ಷ ರೂಪಾಯಿ ಆಗುವ ಸರ್ಜರಿಗೆ ಮೂರು ಲಕ್ಷ ರೂಪಾಯಿ ಬಿಲ್ ಕಳುಹಿಸಲಾಗುತ್ತದೆ. ಕೊನೆಗೆ ವಿಮಾ ಕಂಪನಿಗಳು ಎಲ್ಲೋ ದೂರದಲ್ಲಿ ಕುಳಿತು ಸರಿಯಾಗಿ ಸ್ಪಂದಿಸದೆ, 50 ಸಾವಿರ ರೂಪಾಯಿಯನ್ನು ರೋಗಿಯ ಕಡೆಯವರೇ ಕೈಯಿಂದ ಭರಿಸುವಂತೆ ಮಾಡುತ್ತಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಶೀಘ್ರದಲ್ಲೇ ಇನ್ಶೂರೆನ್ಸ್ ಕಂಪನಿಗಳ ಪ್ರತ್ಯೇಕ ಸಭೆ ಕರೆದು ಕಟ್ಟುನಿಟ್ಟಿನ ನಿಯಮ ಜಾರಿಗೆ ತರುವುದಾಗಿ ಎಚ್ಚರಿಕೆ ನೀಡಿದ್ದಾರೆ.

Must Read

Skip to toolbar