ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಡುಗಡೆಯ ದಿನಾಂಕ ಸಮೀಪಿಸುತ್ತಿರುವ ಸಮಯದಲ್ಲೇ ಧ್ರುವ ಸರ್ಜಾ ಅಭಿನಯದ ‘ಕೆಡಿ’ ಸಿನಿಮಾ ಮತ್ತೊಮ್ಮೆ ವಿವಾದದ ಸುಳಿಯಲ್ಲಿ ಸಿಲುಕಿದೆ. ಈಗಾಗಲೇ ‘ಸೆರಗ ಸರ್ಸೆ’ ಹಾಡಿನ ಸಾಹಿತ್ಯ ಮತ್ತು ಚಿತ್ರೀಕರಣದ ಬಗ್ಗೆ ದೇಶವ್ಯಾಪಿ ಚರ್ಚೆಗೆ ಕಾರಣವಾಗಿದ್ದ ಪ್ರಕರಣದಲ್ಲಿ ರಾಷ್ಟ್ರೀಯ ಮಹಿಳಾ ಆಯೋಗ ಮತ್ತೆ ಕಠಿಣ ನಿಲುವು ತಳೆದಿದ್ದು, ನಟಿ ನೋರಾ ಫತೇಹಿಗೆ ಮತ್ತೊಮ್ಮೆ ನೊಟೀಸ್ ಜಾರಿ ಮಾಡಿದೆ. ಈ ಬೆಳವಣಿಗೆ ಸಿನಿಮಾ ತಂಡಕ್ಕೆ ಹೊಸ ತಲೆನೋವಾಗಿಸಿದೆ.
ಈ ಹಿಂದೆ ನೀಡಿದ್ದ ಸಮನ್ಸ್ ಅನ್ವಯ ಏಪ್ರಿಲ್ 6ರಂದು ನೋರಾ ಫತೇಹಿ ವಿಚಾರಣೆಗೆ ಹಾಜರಾಗಬೇಕಿತ್ತು. ಆದರೆ ಅವರ ಪರವಾಗಿ ವಕೀಲರು ಹಾಜರಾದ ಹಿನ್ನೆಲೆ, ಆಯೋಗ ಇದನ್ನು ಒಪ್ಪದೆ ನಟಿಯೇ ಖುದ್ದಾಗಿ ಹಾಜರಾಗಬೇಕು ಎಂದು ಸೂಚಿಸಿದೆ. ಇದೀಗ ವಿಚಾರಣೆಯನ್ನು ಏಪ್ರಿಲ್ 27ಕ್ಕೆ ಮುಂದೂಡಲಾಗಿದೆ.
ಇದನ್ನೂ ಓದಿ:
ಇದೇ ಪ್ರಕರಣದಲ್ಲಿ ನಟ ಸಂಜಯ್ ದತ್ ಅವರಿಗೆ ಏಪ್ರಿಲ್ 8ರಂದು ಆಯೋಗದ ಮುಂದೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ. ನಿರ್ದೇಶಕ ಪ್ರೇಮ್, ನಿರ್ಮಾಪಕ ಕೆವಿಎನ್ ವೆಂಕಟೇಶ್ ಹಾಗೂ ಹಿಂದಿ ಸಾಹಿತ್ಯ ರಚಿಸಿದ ರಖೀಬ್ ಆಲಂ ಅವರಿಗೂ ಈ ಹಿಂದೆ ನೊಟೀಸ್ ನೀಡಲಾಗಿತ್ತು.
ವಿವಾದ ತೀವ್ರಗೊಂಡ ಬಳಿಕ ನಿರ್ದೇಶಕ ಪ್ರೇಮ್ ವಿಡಿಯೋ ಮೂಲಕ ಕ್ಷಮೆ ಕೇಳಿದ್ದು, ಹಾಡಿನ ಸಾಹಿತ್ಯವನ್ನು ಪರಿಷ್ಕರಿಸಿ ಮರುಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ. ಹಾಡಿನಿಂದ ಯಾರಿಗಾದರೂ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸಿರುವ ಅವರು, ವಿವಾದಿತ ಭಾಗವನ್ನು ಹಿಂತೆಗೆದುಕೊಳ್ಳುವ ನಿರ್ಧಾರ ಕೈಗೊಂಡಿದ್ದಾರೆ.



