ಹೊಸದಿಗಂತ ವರದಿ ಬೆಳಗಾವಿ:
ಡಯಾಬಿಟಿಸ್ ಅಷ್ಟು ಮಾರಕ ಕಾಯಿಲೆಯಲ್ಲ. ಸಮಯಕ್ಕೆ ಸರಿಯಾಗಿ ವೈದ್ಯರ ಸಲಹೆ ಪಡೆದು ಸೂಕ್ತ ಚಿಕಿತ್ಸೆ ಪಡೆದರೆ ರೋಗವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬಹುದು ಎಂದು ಹಿರಿಯ ಮಧುಮೇಹ ತಜ್ಞ ಡಾ. ಸಂದೀಪ್ ಶ್ರೀವಾಸ್ತವ ಹೇಳಿದರು.
ನಗರದ ಹೊರವಲಯದ ಖಾಸಗಿ ಹೋಟೆಲ್ ನಲ್ಲಿ ಮೆಡ್ ಬೆಲ್ ಗ್ಲೋಬಲ್ ಹೆಲ್ತ್ ಕೇರ್ ಮತ್ತು ಸಂಶೋದನೆ ಪೌಂಡೇಶನ್ ವತಿಯಿಂದ ಆಯೋಜಿಸಲಾದ ಎರಡು ದಿನದ ಮಧುಮೇಹ (diabetes) ಜಾಗೃತ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಧುಮೇಹ ರೋಗಿಗಳು ರೋಗದ ಬಗ್ಗೆ ಅನಗತ್ಯ ಭಯ ಮತ್ತು ಆತಂಕಕ್ಕೆ ಒಳಗಾಗಬಾರದು. ಧೈರ್ಯ ಮತ್ತು ಸ್ಥೈರ್ಯದಿಂದ ಆರೋಗ್ಯದ ಕಡೆ ಗಮನ ಹರಿಸಿದರೆ ಉತ್ತಮ ಜೀವನ ನಡೆಸಲು ಸಾಧ್ಯವಾಗುತ್ತದೆ. ನಿಯಮಿತ ವ್ಯಾಯಾಮ, ಗುಣಮಟ್ಟದ ಆಹಾರ ಸೇವನೆ ಹಾಗೂ ಆರೋಗ್ಯಕರ ಜೀವನಶೈಲಿಯ ಮೂಲಕ ಮಧುಮೇಹವನ್ನು ನಿಯಂತ್ರಣದಲ್ಲಿ ಇಡಬಹುದು ಎಂದರು.
ಬೆಳಗಾವಿಯಲ್ಲಿ ಬೃಹತ್ ಮಧುಮೇಹ ( diabetes) ಜಾಗೃತ ಕಾರ್ಯಕ್ರಮವನ್ನು ಆಯೋಜಿಸಿದ ಮೆಡ್ ಬೆಲ್ ಗ್ಲೋಬಲ್ ಸಂಸ್ಥೆ ಬಗ್ಗೆ ಅಪಾರ ಮೆಚ್ಚುಗೆ ತಿಳಿಸಿದರು.
ತಂತ್ರಜ್ಞಾನದ ಅಭಿವೃದ್ಧಿಯಿಂದ ಇಂದು ಮಧುಮೇಹ ಸೇರಿದಂತೆ ಅನೇಕ ಕಾಯಿಲೆಗಳಿಗೆ ಆಧುನಿಕ ಚಿಕಿತ್ಸಾ ಸೌಲಭ್ಯಗಳು ಲಭ್ಯವಿವೆ. ಆದ್ದರಿಂದ ರೋಗವನ್ನು ನಿರ್ಲಕ್ಷಿಸದೆ ಆರಂಭಿಕ ಹಂತದಲ್ಲಿಯೇ ತಪಾಸಣೆ ಮಾಡಿಸಿಕೊಳ್ಳುವುದು ಹಾಗೂ ವೈದ್ಯರ ಸಲಹೆ ಪಾಲಿಸುವುದು ಅಗತ್ಯ ಎಂದು ಹೇಳಿದರು.
ಇದನ್ನೂ ಓದಿ:
ಇಂದಿನ ಜೀವನಶೈಲಿ, ಒತ್ತಡ ಹಾಗೂ ಅನಿಯಮಿತ ಆಹಾರ ಪದ್ಧತಿಯಿಂದ ಮಧುಮೇಹ ಪ್ರಕರಣಗಳು ಹೆಚ್ಚಾಗುತ್ತಿವೆ. ಕೆಲಸದ ಜತೆ ಆರೋಗ್ಯದ ಬಗ್ಗೆಯೂ ಹೆಚ್ಚಿನ ಕಾಳಜಿ ವಹಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಮುನ್ನೆಚ್ಚರಿಕೆ ಮತ್ತು ಜಾಗೃತಿ ಅತ್ಯಂತ ಮುಖ್ಯ ಎಂದು ಅವರು ಅಭಿಪ್ರಾಯಪಟ್ಟರು.
ಮುಖ್ಯ ಅತಿಥಿಯಾಗಿ ಭಾಗವಹಿಸಿ ಡಿಸಿಪಿ ನಾರಾಯಣ ಭರಮನಿ ಮಾತನಾಡಿ, “ವೈದ್ಯರು ಮತ್ತು ಪೊಲೀಸರು ಎರಡೂ ಕ್ಷೇತ್ರಗಳಲ್ಲಿ ಹೆಚ್ಚಿನ ಒತ್ತಡದ ನಡುವೆ ಕರ್ತವ್ಯ ನಿರ್ವಹಿಸಬೇಕಾಗುತ್ತದೆ. ಸಮಾಜದಲ್ಲಿ ಉತ್ತಮ ಹೆಸರು ಮತ್ತು ವಿಶ್ವಾಸ ಗಳಿಸಲು ನಿರಂತರ ಪರಿಶ್ರಮ, ಬದ್ಧತೆ ಹಾಗೂ ಸೇವಾ ಮನೋಭಾವ ಅಗತ್ಯ,” ಹಣದಿಂದ ಎಲ್ಲವನ್ನೂ ಖರೀದಿಸಬಹುದು ಎಂಬ ಊಹೆ ಇದೆ. ಜೀವವನ್ನು ಖರೀದಿಸಲು ಸಾಧ್ಯವಿಲ್ಲ, ಆದರೆ. ವೈದ್ಯರು ಜೀವನವನ್ನು ಉಳಿಸುವ ದೈವ ಸ್ವರೂಪಿಗಳು ಎಂದು ಕಿವಿಮಾತು ಹೇಳಿದರು.
ಇದೇ ಸಂದರ್ಭದಲ್ಲಿ ಅಕ್ಯುಮೆಂಟಸ್ ಸೇರಿದಂತೆ ವಿವಿಧ ಆರೋಗ್ಯ ಮತ್ತು ವೈದ್ಯಕೀಯ ಸಂಸ್ಥೆಗಳ ಒಟ್ಟು 23 ಪ್ರದರ್ಶನ ಮಳಿಗೆಗಳನ್ನು (ಸ್ಟಾಲ್ಗಳು) ಸ್ಥಾಪಿಸಲಾಗಿದ್ದು, ವೈದ್ಯಕೀಯ ಕ್ಷೇತ್ರದ ನೂತನ ಸಾಧನಗಳು, ತಂತ್ರಜ್ಞಾನಗಳು ಮತ್ತು ಚಿಕಿತ್ಸಾ ವಿಧಾನಗಳ ಕುರಿತು ಮಾಹಿತಿ ನೀಡಲಾಯಿತು.
ಈ ಕಾರ್ಯಕ್ರಮದಲ್ಲಿ ಡಾ. ಡಿ.ನಾಗೇಶ್ವರ ರೆಡಿ, ಡಾ.ಅರವಿಂದ ಸೊಸಲೆ, ಡಾ.ಹೇಮಂತ ಕೌಜಲಗಿ, ಮೆಡ್ ಬೆಲ್ ಗ್ಲೋಬಲ್ ಸಂಸ್ಥೆಯ ಅಧ್ಯಕ್ಷರು, ಖ್ಯಾತ ವೈದ್ಯರಾದ ಡಾ. ಗೀರಿಶ ಸೋನವಾಲಕರ್, ಡಾ.ಮಾಧವ ಪ್ರಭು, ಡಾ. ಸೈಯದ್ ಅಲಿ, ಡಾ. ವಿಕ್ರಾಂತ ಬಿ. ಘಟನಟ್ಟಿ, ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ ವೈದ್ಯರು, ಆರೋಗ್ಯ ತಜ್ಞರು, ವೈದ್ಯಕೀಯ ವಿದ್ಯಾರ್ಥಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.



