April 9, 2026
Thursday, April 9, 2026
spot_img

IPL | 1 ರನ್ ಗೆ ಮಕಾಡೆ ಮಲಗಿದ ಡೆಲ್ಲಿ: ಗೆಲುವಿನ ಖಾತೆ ತೆರೆದ ಗುಜರಾತ್ ಟೈಟನ್ಸ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದ ಐಪಿಎಲ್‌ನ ರೋಚಕ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ತಂಡ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಕೇವಲ 1 ರನ್ ಅಂತರದಲ್ಲಿ ಗೆದ್ದು ಸಂಭ್ರಮಿಸಿತು. ಕೊನೆಯ ಎಸೆತದವರೆಗೂ ಹೋರಾಡಿದ ಡೆಲ್ಲಿ, ಗೆಲುವಿನ ದಡ ತಲುಪುವಷ್ಟರಲ್ಲಿ ಪಂದ್ಯ ಕೈಚೆಲ್ಲಿತು.

ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟನ್ಸ್ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 210 ರನ್‌ಗಳ ಭರ್ಜರಿ ಮೊತ್ತ ಕಲೆಹಾಕಿತು. ನಾಯಕ ಶುಭ್‌ಮನ್ ಗಿಲ್ 70 ರನ್‌, ಜೋಸ್ ಬಟ್ಲರ್ 52 ರನ್ ಮತ್ತು ವಾಷಿಂಗ್ಟನ್ ಸುಂದರ್ 55 ರನ್‌ಗಳ ಅಮೂಲ್ಯ ಕೊಡುಗೆ ನೀಡಿದರು.

211 ರನ್‌ಗಳ ಗುರಿ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ಪರ ಕನ್ನಡಿಗ ಕೆಎಲ್ ರಾಹುಲ್ ಅದ್ಭುತ ಹೋರಾಟ ತೋರಿಸಿದರು. ಅವರು 52 ಎಸೆತಗಳಲ್ಲಿ 11 ಬೌಂಡರಿ ಮತ್ತು 4 ಸಿಕ್ಸರ್ ಸಹಿತ 92 ರನ್‌ಗಳಿಸಿ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ಆದರೆ ಶತಕದ ಅಂಚಿನಲ್ಲಿ ಔಟಾದದ್ದು ಪಂದ್ಯಕ್ಕೆ ದೊಡ್ಡ ತಿರುವಾಯಿತು.

ಇದನ್ನೂ ಓದಿ:

ಕೊನೆಯ ಎರಡು ಓವರ್‌ಗಳಲ್ಲಿ 37 ರನ್ ಅಗತ್ಯವಿದ್ದಾಗ ಡೇವಿಡ್ ಮಿಲ್ಲರ್ ಸ್ಫೋಟಕ ಆಟವಾಡಿ ಪಂದ್ಯವನ್ನು ಕೊನೆಯ ಎಸೆತದವರೆಗೂ ತಂದರು. ಅಂತಿಮ ಓವರ್‌ನಲ್ಲಿ 13 ರನ್ ಬೇಕಿದ್ದಾಗ ಮಿಲ್ಲರ್ ಸಿಕ್ಸರ್ ಬಾರಿಸಿ ಗೆಲುವಿನ ಆಸೆ ಜೀವಂತವಾಗಿರಿಸಿದರು.

ಆದರೆ ಕೊನೆಯ ಎರಡು ಎಸೆತಗಳಲ್ಲಿ ಕೇವಲ 2 ರನ್ ಅಗತ್ಯವಿದ್ದ ಕ್ಷಣದಲ್ಲಿ ಸಿಂಗಲ್ ಅವಕಾಶವನ್ನು ಕೈಬಿಟ್ಟದ್ದು ಡೆಲ್ಲಿಗೆ ದುಬಾರಿಯಾಯಿತು. ಅಂತಿಮ ಎಸೆತದಲ್ಲಿ ರನ್‌ಔಟ್ ಆಗುತ್ತಿದ್ದಂತೆ ಗುಜರಾತ್ 1 ರನ್ ಅಂತರದ ರೋಚಕ ಗೆಲುವು ದಾಖಲಿಸಿತು.

ಗುಜರಾತ್ ಪರ ರಶೀದ್ ಖಾನ್ 3 ವಿಕೆಟ್ ಪಡೆದು ಗೆಲುವಿನ ಹೀರೋ ಆಗಿ ಹೊರಹೊಮ್ಮಿದರು. ಪಂದ್ಯದ ಕೊನೆಯ ಕ್ಷಣದ ನಾಟಕೀಯತೆ ಅಭಿಮಾನಿಗಳಿಗೆ ಥ್ರಿಲ್ ನೀಡಿದ್ದಂತೂ ನಿಜ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !