ಹೊಸದಿಗಂತ ಡಿಜಿಟಲ್ ಡೆಸ್ಕ್:
ಐಪಿಎಲ್ 2026ರ ನಡುವೆಯೇ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಪಂದ್ಯ ಶಿಸ್ತು ಮತ್ತು ವೃತ್ತಿಪರತೆಯನ್ನು ಮತ್ತಷ್ಟು ಬಲಪಡಿಸಲು ಹೊಸ ನಿಯಮಗಳನ್ನು ಜಾರಿಗೊಳಿಸಿದೆ. ಮೈದಾನದಲ್ಲಿ ಅನಗತ್ಯ ಗೊಂದಲ ಮತ್ತು ವಿಳಂಬ ತಪ್ಪಿಸಲು, ಆಡದ ಆಟಗಾರರ ಚಲನವಲನದ ಮೇಲೆ ಬಿಸಿಸಿಐ ಕಟ್ಟುನಿಟ್ಟಿನ ನಿಯಂತ್ರಣ ಹೇರಿದೆ.
ಹೊಸ ಮಾರ್ಗಸೂಚಿ ಪ್ರಕಾರ, ತಂಡದ ಅಧಿಕೃತ ಪಟ್ಟಿಯಲ್ಲಿ ಇರುವ 16 ಆಟಗಾರರಿಗೆ ಮಾತ್ರ ಪಂದ್ಯ ನಡೆಯುವ ವೇಳೆ ಮೈದಾನದ ಒಳಗೆ ಪ್ರವೇಶಕ್ಕೆ ಅವಕಾಶ ಇರುತ್ತದೆ. ಇಂಪ್ಯಾಕ್ಟ್ ಆಟಗಾರ ಸೇರಿ ಈ ಪಟ್ಟಿಯ ಹೊರಗಿನ ಆಟಗಾರರು ಡ್ರಿಂಕ್ಸ್ ತರುವುದು, ಬ್ಯಾಟ್ ನೀಡುವುದು ಅಥವಾ ಸಂದೇಶ ಕೊಂಡೊಯ್ಯುವುದು ಸೇರಿದಂತೆ ಯಾವುದೇ ಕಾರಣಕ್ಕೂ ಮೈದಾನ ಪ್ರವೇಶಿಸುವಂತಿಲ್ಲ.
ಇದನ್ನೂ ಓದಿ:
ಇದರ ಜೊತೆಗೆ, ಬೌಂಡರಿ ಗೆರೆಯ ಬಳಿ ತರಬೇತಿ ಬಿಬ್ಸ್ ಧರಿಸಿ ಓಡಾಡುವ ಆಟಗಾರರ ಸಂಖ್ಯೆಯನ್ನು ಐದಕ್ಕೆ ಮಾತ್ರ ಸೀಮಿತಗೊಳಿಸಲಾಗಿದೆ. ಉಳಿದವರು ಕಡ್ಡಾಯವಾಗಿ ಡಗೌಟ್‌ನಲ್ಲೇ ಇರಬೇಕು. ಎಲ್‌ಇಡಿ ಜಾಹೀರಾತು ಫಲಕಗಳ ಮುಂದೆ ಕುಳಿತುಕೊಳ್ಳುವುದು ಅಥವಾ ಬೌಂಡರಿ ಮತ್ತು ಜಾಹೀರಾತು ಫಲಕಗಳ ನಡುವಿನ ಜಾಗದಲ್ಲಿ ಸಂಚರಿಸುವುದಕ್ಕೂ ನಿರ್ಬಂಧ ವಿಧಿಸಲಾಗಿದೆ.
ಇದೇ ವೇಳೆ ಪಂದ್ಯ ದಿನದ ಅಭ್ಯಾಸಕ್ಕೂ ನಿರ್ಬಂಧ ಮುಂದುವರಿದಿದ್ದು, ಆಟಗಾರರು ಕ್ರೀಡಾಂಗಣಕ್ಕೆ ತಂಡದ ಬಸ್‌ನಲ್ಲೇ ಆಗಮಿಸಬೇಕು ಎಂಬ ನಿಯಮವನ್ನೂ ಬಿಸಿಸಿಐ ಮತ್ತೆ ಸ್ಪಷ್ಟಪಡಿಸಿದೆ.
ಇತ್ತೀಚೆಗೆ ನಡೆದ ಕೆಲವು ವಿವಾದಾತ್ಮಕ ಘಟನೆಗಳ ಬೆನ್ನಲ್ಲೇ ಈ ನಿಯಮ ಜಾರಿಯಾಗಿರುವುದು ಗಮನಾರ್ಹ. ಪಂದ್ಯ ಘನತೆ ಮತ್ತು ಸಮಯಪಾಲನೆಯನ್ನು ಕಾಪಾಡಲು ಈ ಕ್ರಮ ಅನಿವಾರ್ಯ ಎಂದು ಬಿಸಿಸಿಐ ಅಭಿಪ್ರಾಯಪಟ್ಟಿದೆ.



