ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಪಾರ ಪ್ರಮಾಣದ ನಗದು ಪತ್ತೆ ಪ್ರಕರಣಕ್ಕೆ ಸಂಬಂಧಿಸಿ ಸುದ್ದಿಯಾಗಿದ್ದ ಅಲಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿ ಯಶವಂತ್ ವರ್ಮಾ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ. ರಾಷ್ಟ್ರಪತಿಗಳಿಗೆ ಸಲ್ಲಿಸಿದ ಈ ರಾಜೀನಾಮೆ ನ್ಯಾಯಾಂಗ ವಲಯದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ.
ಈ ಪ್ರಕರಣದ ಮೂಲ 2025ರ ಮಾರ್ಚ್ ತಿಂಗಳಲ್ಲಿ ದೆಹಲಿಯಲ್ಲಿರುವ ಅವರ ಅಧಿಕೃತ ನಿವಾಸದಲ್ಲಿ ಅಗ್ನಿ ಅವಘಡ ಸಂಭವಿಸಿದ ಬಳಿಕ ಸುಟ್ಟ ಹಾಗೂ ಅರ್ಧ ಸುಟ್ಟ ನಗದು ಕಟ್ಟುಗಳು ಪತ್ತೆಯಾಗಿದ್ದವು. ಈ ಘಟನೆ ದೇಶಾದ್ಯಂತ ಭಾರೀ ಸಂಚಲನ ಸೃಷ್ಟಿಸಿತ್ತು. ಬಳಿಕ ಅವರ ವಿರುದ್ಧ ಆಂತರಿಕ ತನಿಖೆ ಆರಂಭಗೊಂಡಿದ್ದು, ನಂತರ ಅವರನ್ನು ದೆಹಲಿ ಹೈಕೋರ್ಟ್‌ನಿಂದ ಅಲಹಾಬಾದ್ ಹೈಕೋರ್ಟ್‌ಗೆ ವರ್ಗಾಯಿಸಲಾಗಿತ್ತು.
ಇದನ್ನೂ ಓದಿ:
ಪ್ರಕರಣದ ಗಂಭೀರತೆಯನ್ನು ಗಮನಿಸಿ ಲೋಕಸಭಾ ಸ್ಪೀಕರ್ ತನಿಖಾ ಸಮಿತಿಯನ್ನು ರಚಿಸಿ, ಮಹಾಭಿಯೋಗ ಪ್ರಕ್ರಿಯೆ ಆರಂಭಿಸುವತ್ತ ಕ್ರಮ ಕೈಗೊಂಡಿದ್ದರು. ಇದೇ ವೇಳೆ, ತಮ್ಮ ವಿರುದ್ಧ ನಡೆಯುತ್ತಿರುವ ತನಿಖೆಯನ್ನು ಪ್ರಶ್ನಿಸಿ ನ್ಯಾಯಮೂರ್ತಿ ವರ್ಮಾ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಆದರೆ ಸುಪ್ರೀಂ ಕೋರ್ಟ್ ತನಿಖೆಗೆ ತಡೆ ನೀಡಲು ನಿರಾಕರಿಸಿ, ಅರ್ಜಿಯನ್ನು ವಜಾಗೊಳಿಸಿತ್ತು.
ಇದೀಗ ರಾಜೀನಾಮೆಯೊಂದಿಗೆ ಈ ವಿವಾದ ಮತ್ತೊಂದು ತಿರುವು ಪಡೆದುಕೊಂಡಿದ್ದು, ನ್ಯಾಯಾಂಗ ಪಾರದರ್ಶಕತೆ ಮತ್ತು ಹೊಣೆಗಾರಿಕೆ ಕುರಿತು ಹೊಸ ಚರ್ಚೆಗಳಿಗೆ ಕಾರಣವಾಗಿದೆ. ಮುಂದಿನ ದಿನಗಳಲ್ಲಿ ಈ ಪ್ರಕರಣದ ರಾಜಕೀಯ ಮತ್ತು ಕಾನೂನು ಆಯಾಮಗಳ ಮೇಲೂ ಗಮನ ಕೇಂದ್ರೀಕರಿಸುವ ಸಾಧ್ಯತೆ ಇದೆ.



