ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಧ್ಯಪ್ರಾಚ್ಯದಲ್ಲಿನ ಸಂಘರ್ಷಕ್ಕೆ ಅಮೆರಿಕ ತಾತ್ಕಾಲಿಕ ಕದನ ವಿರಾಮ ಘೋಷಿಸಿದ್ದು, ಆದರೆ ಇಸ್ರೇಲ್ ಮಾತ್ರ ಯಾವುದೇ ಮಾತಿಗೂ ಕಿಮ್ಮತ್ತು ನೀಡದೆ ಲೆಬನಾನ್ ಮೇಲೆ ತನ್ನ ದಾಳಿಯನ್ನು ಮುಂದುವರೆಸಿದ್ದು, ಮತ್ತೆ ಪಟ್ಟಣಗಳ ಮೇಲೆ ವಾಯುದಾಳಿ ನಡೆಸಿದೆ.
ಈಗಾಗಲೇ ಕದನ ವಿರಾಮ ಘೋಷಣೆ ಬಳಿಕ ದಕ್ಷಿಣ ಲೆಬನಾನ್ನ ಬೈರುತ್ ಮತ್ತು ಬೆಕಾ ಕಣಿವೆ ಪ್ರದೇಶದ ಮೇಲೆ ಇಸ್ರೇಲ್ ಕೇವಲ 10 ನಿಮಿಷಗಳಲ್ಲಿ ಸುಮಾರು 100 ಸ್ಥಳಗಳನ್ನು ಗುರಿಯಾಗಿಸಿ ದಾಳಿ ನಡೆಸಿತ್ತು. ಈ ಭೀಕರ ದಾಳಿಯಲ್ಲಿ ಅಂದಾಜು 254 ಜನ ಮೃತಪಟ್ಟಿದ್ದು, 837 ಜನ ತೀವ್ರವಾಗಿ ಗಾಯಗೊಂಡಿದ್ದಾರೆ.
ಇದೀಗ ಮತ್ತೆ ಲೆಬನಾನ್ ನ ಅಲ್-ಅಬ್ಬಾಸ್ಸಿಹ್, ಕಾಫ್ರಾ, ಜಮೈಜ್ಮೆಹ್, ಸಫಾದ್ ಅಲ್-ಬತ್ತಿಖ್, ಮಜ್ದಲ್ ಸೆಲೆಮ್ ಮತ್ತು ದೀರ್ ಅಂತರ್ ಸೇರಿದಂತೆ ಹಲವಾರು ಪಟ್ಟಣಗಳನ್ನು ಗುರಿಯಾಗಿಸಿಕೊಂಡು ಇಸ್ರೇಲ್ ಭೀಕರ ದಾಳಿ ನಡೆಸಿದೆ .
ಲೆಬನಾನ್ ಮೇಲಿನ ದಾಳಿಗಳನ್ನು ನಿಲ್ಲಿಸುವಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮನವಿಯನ್ನು ಧಿಕ್ಕರಿಸಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತೆ ದಾಳಿ ಮುಂದುವರಿಸಿದ್ದು, ನಾವು ಈ ಕದನ ವಿರಾಮವನ್ನು ಒಪ್ಪಿಕೊಳ್ಳತ್ತೇವೆ, ಆದರೆ ಲೆಬನಾನ್ ಮತ್ತು ಹೆಜ್ಬೊಲ್ಲಾ ಮೇಲೆ ದಾಳಿಯನ್ನು ಮುಂದುವರೆಸುತ್ತೇವೆಂದು ಖಡಕ್ ಆಗಿ ತಿಳಿಸಿದ್ದಾರೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ಯುದ್ಧದ ಭೀಕರತೆ ಮತ್ತಷ್ಟು ಹೆಚ್ಚಾಗುವ ಆತಂಕ ಜಾಗತಿಕ ನಾಯಕರಲ್ಲಿ ಶುರುವಾಗಿದೆ.



