ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜಸ್ಥಾನ್ ರಾಯಲ್ಸ್ ವಿರುದ್ಧದ ಸೋಲಿನ ಬಳಿಕವೂ ಆರ್‌ಸಿಬಿ ನಾಯಕ ರಜತ್ ಪಾಟಿದಾರ್ ತಂಡದ ಪ್ರದರ್ಶನದ ಬಗ್ಗೆ ಆಶಾವಾದಿ ಮಾತುಗಳನ್ನೇ ಆಡಿದ್ದಾರೆ. ಪಂದ್ಯದ ನಂತರ ಮಾತನಾಡಿದ ಪಾಟಿದಾರ್, ಆರಂಭಿಕ ಆಘಾತದಿಂದ ಚೇತರಿಸಿಕೊಂಡು 200ಕ್ಕೂ ಹೆಚ್ಚು ರನ್ ಕಲೆಹಾಕಿರುವುದು ತಂಡಕ್ಕೆ ದೊಡ್ಡ ಸಕಾರಾತ್ಮಕ ಅಂಶ ಎಂದು ಹೇಳಿದ್ದಾರೆ.
ಮೊದಲು ಬ್ಯಾಟ್ ಮಾಡಿದ ಆರ್‌ಸಿಬಿ ಪವರ್‌ಪ್ಲೇಯಲ್ಲೇ ಸತತ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆದರೆ ನಾಯಕನಾಗಿ ಹೊಣೆ ಹೊತ್ತ ಪಾಟಿದಾರ್, ಕೇವಲ 40 ಎಸೆತಗಳಲ್ಲಿ 63 ರನ್ ಸಿಡಿಸಿ ತಂಡವನ್ನು 201 ರನ್‌ಗಳ ಗೌರವಾನ್ವಿತ ಮೊತ್ತಕ್ಕೆ ಕೊಂಡೊಯ್ದರು.
ಪವರ್‌ಪ್ಲೇನಲ್ಲಿ ನಾವು ವಿಕೆಟ್ ಕಳೆದುಕೊಂಡ ರೀತಿಯನ್ನು ನೋಡಿದರೆ, ಅಲ್ಲಿಂದ 201 ರನ್‌ಗಳಿಗೆ ತಲುಪಿರುವುದು ಉತ್ತಮ ಸೂಚನೆ. ಸೋಲಿನ ನಡುವೆಯೂ ಇದನ್ನು ನಾವು ಪಾಸಿಟಿವ್ ಆಗಿ ತೆಗೆದುಕೊಳ್ಳಬೇಕು, ಎಂದು ಹೇಳಿದರು.
ಇದನ್ನೂ ಓದಿ:
ಇನ್ನು ರಾಜಸ್ಥಾನದ ವೈಭವ್ ಸೂರ್ಯವಂಶಿ ಪವರ್‌ಪ್ಲೇಯಲ್ಲೇ ಸ್ಫೋಟಕ ಬ್ಯಾಟಿಂಗ್ ನಡೆಸಿದ್ದು ಪಂದ್ಯದ ಫಲಿತಾಂಶವನ್ನು ಬದಲಿಸಿತು ಎಂದು ಅವರು ಒಪ್ಪಿಕೊಂಡರು. ಅವರ ವೇಗದ ಇನ್ನಿಂಗ್ಸ್‌ವೇ ಆರ್‌ಸಿಬಿ ಸೋಲಿಗೆ ಪ್ರಮುಖ ಕಾರಣವಾಗಿದೆ ಎಂದು ಪಾಟಿದಾರ್ ಅಭಿಪ್ರಾಯಪಟ್ಟರು.
ಮುಂದಿನ ಪಂದ್ಯದಲ್ಲಿ ತಪ್ಪುಗಳನ್ನು ಸರಿಪಡಿಸಿಕೊಂಡು ಮುಂಬೈ ಇಂಡಿಯನ್ಸ್ ವಿರುದ್ಧ ಮತ್ತೆ ಗೆಲುವಿನ ಹಾದಿಗೆ ಮರಳುವ ವಿಶ್ವಾಸವನ್ನು ಆರ್‌ಸಿಬಿ ನಾಯಕ ವ್ಯಕ್ತಪಡಿಸಿದ್ದಾರೆ.



