ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಳೆದ ತಿಂಗಳು ನಡೆದ ಎಚ್‌ಐವಿ ಸೋಂಕಿತ ರಕ್ತವನ್ನು ಬಲವಂತವಾಗಿ ಇಂಜೆಕ್ಟ್ ಮಾಡಿದ ಪ್ರಕರಣ ಇದೀಗ ಮತ್ತೊಂದು ದುರ್ಘಟನೆಯ ತಿರುವು ಪಡೆದಿದೆ.
ಆರೋಪಿ ಮತ್ತು ಸಂತ್ರಸ್ತೆ ಸಂಬಂಧಿಕರಾಗಿದ್ದು, ಆಕೆಯ ಪೋಷಕರು ಆರಂಭದಲ್ಲಿ ತಮ್ಮ ಮಗಳ ಮದುವೆಯನ್ನು ಆತನೊಂದಿಗೆ ನಿಶ್ಚಯಿಸಿದ್ದರು.
ಆರೋಪಿಯ ಪೋಷಕರು ಈಗಾಗಲೇ ಎಚ್ಐವಿ ಪೀಡಿತರಾಗಿದ್ದರಿಂದ, ಯುವತಿಯ ಪೋಷಕರು ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಆರೋಪಿಗೂ ವೈರಸ್ ಪರೀಕ್ಷೆ ಮಾಡಿಸಿದ್ದಾರೆ. ಆಗ ಆತನಿಗೂ ಸೋಂಕು ಇರುವುದು ದೃಢಪಟ್ಟಿತು. ಯುವತಿ ತಕ್ಷಣವೇ ಆತನೊಂದಿಗಿನ ಮದುವೆಯನ್ನು ರದ್ದುಗೊಳಿಸಿದ್ದಾಳೆ.
ಇದಾದ ಬಳಿಕ ಮಾರ್ಚ್ 11ರಂದು ಆರೋಪಿ ಮನೋಹರ್ ಯುವತಿಯ ಮನೆಗೆ ತೆರಳಿ ಮದುವೆ ವಿಷಯವಾಗಿ ವಾಗ್ವಾದ ನಡೆಸಿದ್ದಾನೆ. ಯುವತಿ ಮದುವೆಗೆ ಒಪ್ಪದ ಹಿನ್ನೆಲೆಯಲ್ಲಿ ಕೋಪಗೊಂಡ ಆತ, ತನ್ನ ಎಚ್‌ಐವಿ ಸೋಂಕಿತ ರಕ್ತವನ್ನು ಸಿರಿಂಜ್ ಮೂಲಕ ಆಕೆಯ ಕೈಗೆ ಬಲವಂತವಾಗಿ ಇಂಜೆಕ್ಟ್ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಈ ಪ್ರಕರಣದ ಬಳಿಕ ಆತನನ್ನು ಪೊಲೀಸರು ಬಂಧಿಸಿದ್ದರು.
ಇದನ್ನೂ ಓದಿ:
ಘಟನೆಯ ನಂತರ ಯುವತಿ ತೀವ್ರ ಮಾನಸಿಕ ಒತ್ತಡ, ಭಯ ಮತ್ತು ಸಾಮಾಜಿಕ ಕಳಂಕದ ಆತಂಕದಲ್ಲಿ ಇದ್ದಳು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಶುಕ್ರವಾರ ಬೆಳಗ್ಗೆ ಆಕೆ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತಾದರೂ ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.
ಯುವತಿಯ ಆತ್ಮಹತ್ಯೆಗೆ ಹಿಂದಿನ ದಾಳಿ, ಸಾಮಾಜಿಕ ಒತ್ತಡ ಮತ್ತು ಭಾವನಾತ್ಮಕ ಆಘಾತ ಕಾರಣವಾಗಿರಬಹುದೆಂಬ ಅನುಮಾನ ವ್ಯಕ್ತವಾಗಿದ್ದು, ಪೊಲೀಸರು ಎಲ್ಲಾ ಆಯಾಮಗಳಲ್ಲಿ ತನಿಖೆ ಮುಂದುವರಿಸಿದ್ದಾರೆ. ಪ್ರಕರಣ ಇದೀಗ ನಗರದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.



