ಹೊಸದಿಗಂತ ಡಿಜಿಟಲ್ ಡೆಸ್ಕ್:
ಸೋಷಿಯಲ್ ಮೀಡಿಯಾದಲ್ಲಿ ಯಾವುದನ್ನೇ ಆದರೂ ಹಂಚಿಕೊಳ್ಳುವ ಮುನ್ನ ಎಚ್ಚರವಿರಲಿ ಎಂಬ ಮಾತು ಈಗ ನಟ ದುನಿಯಾ ವಿಜಯ್ ಅವರ ವಿಚಾರದಲ್ಲಿ ನಿಜವಾಗಿದೆ. ನಗರಕ್ಕೆ ಭಯಾನಕ ‘ಝಾಂಬಿ ಡ್ರಗ್ಸ್’ ಲಗ್ಗೆ ಇಟ್ಟಿದೆ ಎನ್ನುವ ಸುಳ್ಳು ವಿಡಿಯೋ ಹಂಚಿಕೊಂಡಿದ್ದಕ್ಕಾಗಿ ನಟ ದುನಿಯಾ ವಿಜಯ್ ಅವರಿಗೆ ಬಾಗಲೂರು ಪೊಲೀಸರು ನೋಟಿಸ್ ನೀಡಲು ಸಿದ್ಧತೆ ನಡೆಸಿದ್ದಾರೆ.
ಹೇಮಂತ್ ಎಂಬ ಯುವಕ ಇನ್‌ಸ್ಟಾಗ್ರಾಮ್‌ನಲ್ಲಿ ಝಾಂಬಿ ಡ್ರಗ್ಸ್‌ಗೆ ಸಂಬಂಧಿಸಿದಂತೆ ಹರಿಬಿಟ್ಟಿದ್ದ ವಿಡಿಯೋವನ್ನು ನಟ ದುನಿಯಾ ವಿಜಯ್ ಅವರು ತಮ್ಮ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದರು. ಅಷ್ಟೇ ಅಲ್ಲದೆ, “ನಾನು ಸಿನಿಮಾದ ಮೂಲಕ ಜಾಗೃತಿ ಮೂಡಿಸಿದರೂ ಪೊಲೀಸರು ಸರಿಯಾದ ಕ್ರಮ ಕೈಗೊಳ್ಳುತ್ತಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು. ಆದರೆ, ಈ ವಿಡಿಯೋ ಸತ್ಯಕ್ಕೆ ದೂರವಾಗಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸುವಂತಿದೆ ಎಂಬುದು ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದೆ.
ಈಗಾಗಲೇ ವಿಡಿಯೋ ಹರಿಬಿಟ್ಟಿದ್ದ ಹೇಮಂತ್‌ನನ್ನು ಬಂಧಿಸಿ ವಿಚಾರಣೆ ನಡೆಸಿರುವ ಪೊಲೀಸರು, ಆತನಿಂದ ಕ್ಷಮಾಪಣಾ ಪತ್ರ ಬರೆಸಿಕೊಂಡು ಬಿಡುಗಡೆ ಮಾಡಿದ್ದಾರೆ. ಆದರೆ ಆ ವಿಡಿಯೋ ಹಂಚಿಕೊಂಡ 20ಕ್ಕೂ ಹೆಚ್ಚು ಮಂದಿಗೆ ನೋಟಿಸ್ ನೀಡಲು ಪೊಲೀಸರು ಮುಂದಾಗಿದ್ದು, ಈ ಪಟ್ಟಿಯಲ್ಲಿ ವಿಜಯ್ ಹೆಸರೂ ಇದೆ. ವಿಜಯ್ ಪ್ರಸ್ತುತ ಹೊರರಾಜ್ಯದಲ್ಲಿರುವ ಕಾರಣ ಅವರಿಗೆ ವಾಟ್ಸಪ್ ಮೂಲಕ ನೋಟಿಸ್ ಕಳುಹಿಸಿ ವಿಚಾರಣೆಗೆ ಕರೆಯಲು ಬಾಗಲೂರು ಪೊಲೀಸರು ಸಿದ್ಧತೆ ನಡೆಸಿದ್ದಾರೆ.
ಒಟ್ಟಿನಲ್ಲಿ, ಸತ್ಯಾಸತ್ಯತೆ ತಿಳಿಯದೆ ಸಮಾಜದಲ್ಲಿ ಆತಂಕ ಮೂಡಿಸುವ ವಿಡಿಯೋ ಹಂಚಿಕೊಂಡಿರುವುದು ಈಗ ನಟನಿಗೆ ಕಾನೂನು ಸಂಕಷ್ಟ ತಂದೊಡ್ಡಿದೆ.



