July 4, 2026
Saturday, July 4, 2026
spot_img

‘ದೋಸೆ, ಇಡ್ಲಿ, ಸಾಂಬಾರ್, ಚಟ್ನಿ, ಚಟ್ನಿ…’ಯಿಂದ ಅವಮಾನ ಆಗಿದೆ: BCCIಗೆ ದೂರು ಕೊಟ್ಟ ಸಿಎಸ್‌ಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಐಪಿಎಲ್‌ನ ಅತ್ಯಂತ ಚರ್ಚಿತ ಮುಖಾಮುಖಿಗಳಲ್ಲಿ ಒಂದಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ‘ಸೌತ್ ಡರ್ಬಿ’ ಈ ಬಾರಿ ಮೈದಾನದ ಆಟಕ್ಕಿಂತ ಹೆಚ್ಚಾಗಿ ವಿವಾದದಿಂದ ಸುದ್ದಿಯಾಗಿದೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯ ವೇಳೆ ಡಿಜೆ ವರ್ತನೆ ಕುರಿತು ಸಿಎಸ್‌ಕೆ ಮ್ಯಾನೇಜ್‌ಮೆಂಟ್ ಬಿಸಿಸಿಐಗೆ ಅಧಿಕೃತ ದೂರು ಸಲ್ಲಿಸಿರುವುದು ಹೊಸ ಚರ್ಚೆಗೆ ಕಾರಣವಾಗಿದೆ.

ಏಪ್ರಿಲ್ 5ರಂದು ನಡೆದ ಪಂದ್ಯದಲ್ಲಿ ಸಿಎಸ್‌ಕೆ ಆಟಗಾರರು ಔಟಾದ ಕ್ಷಣಗಳಲ್ಲಿ ಹಾಗೂ ಪ್ರೇಕ್ಷಕರನ್ನು ರಂಜಿಸುವ ವೇಳೆ “ದೋಸೆ, ಇಡ್ಲಿ, ಸಾಂಬಾರ್, ಚಟ್ನಿ…” ಹಾಡನ್ನು ಪದೇ ಪದೇ ಪ್ಲೇ ಮಾಡಲಾಗಿದೆ ಎನ್ನಲಾಗಿದೆ. ಈ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ಮೀಮ್ ರೂಪದಲ್ಲಿ ವೈರಲ್ ಆಗಿದ್ದು, ತಮಿಳು ಜನರನ್ನು ವ್ಯಂಗ್ಯ ಮಾಡುವ ರೀತಿಯಲ್ಲಿ ಬಳಸಲಾಗುತ್ತದೆ ಎಂಬ ಆರೋಪ ಸಿಎಸ್‌ಕೆ ವಲಯದಿಂದ ಕೇಳಿಬಂದಿದೆ. ಇದೇ ಹಿನ್ನೆಲೆಯಲ್ಲಿ ತಂಡದ ಗೌರವಕ್ಕೆ ಧಕ್ಕೆ ತಂದಂತಾಗಿದೆ ಎಂದು ಮ್ಯಾನೇಜ್‌ಮೆಂಟ್ ಅಸಮಾಧಾನ ವ್ಯಕ್ತಪಡಿಸಿದೆ.

ಇದನ್ನೂ ಓದಿ:

ಸಿಎಸ್‌ಕೆ ಅಧಿಕಾರಿಗಳ ಅಭಿಪ್ರಾಯದಂತೆ, ತವರು ತಂಡವನ್ನು ಬೆಂಬಲಿಸುವುದು ಸಹಜವಾದರೂ ಎದುರಾಳಿ ತಂಡದ ಆಟಗಾರರು ಹಾಗೂ ಅಭಿಮಾನಿಗಳ ಭಾವನೆಗಳಿಗೆ ನೋವುಂಟುಮಾಡುವ ರೀತಿಯ ಮನರಂಜನೆ ಕ್ರೀಡಾ ಮನೋಭಾವಕ್ಕೆ ವಿರುದ್ಧವಾಗಿದೆ. ಈ ಕುರಿತು ಬಿಸಿಸಿಐ ದೂರುವನ್ನು ಗಂಭೀರವಾಗಿ ಪರಿಗಣಿಸಿದ್ದು, ಮುಂದಿನ ದಿನಗಳಲ್ಲಿ ಕ್ರೀಡಾಂಗಣ ಡಿಜೆ ಮತ್ತು ಪ್ರೇಕ್ಷಕ ಮನರಂಜನೆಗೆ ಹೊಸ ಮಾರ್ಗಸೂಚಿಗಳು ಬರಬಹುದೆಂಬ ಮಾತು ಕೇಳಿಬರುತ್ತಿದೆ.

ಒಟ್ಟಿನಲ್ಲಿ, ಐಪಿಎಲ್ ಪೈಪೋಟಿ ಆಟದ ಮಟ್ಟದಲ್ಲೇ ಉಳಿಯಬೇಕು, ಪ್ರಾದೇಶಿಕ ಭಾವನೆಗಳಿಗೆ ಧಕ್ಕೆ ತರುವ ಘಟನೆಗಳು ಮರುಕಳಿಸಬಾರದು ಎಂಬುದು ಅಭಿಮಾನಿಗಳ ಆಶಯವಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !