ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಶ್ವದ ರಾಜಕೀಯ ಮತ್ತು ಆರ್ಥಿಕ ಭೂಪಟದಲ್ಲಿ ಈಗ ‘ಜಲಸಂಧಿ’ಗಳದ್ದೇ ಸದ್ದು. ಇರಾನ್ ಮತ್ತು ಇಸ್ರೇಲ್-ಅಮೆರಿಕ ನಡುವಿನ ಯುದ್ಧದ ಕಿಚ್ಚು ಹಾರ್ಮುಜ್ ಜಲಸಂಧಿಯನ್ನು ಬಂದ್ ಮಾಡಿಸಿದೆ. ಇದರಿಂದಾಗಿ ಭಾರತ ಸೇರಿದಂತೆ ಹಲವು ರಾಷ್ಟ್ರಗಳು ತೈಲ ಮತ್ತು ಅನಿಲ ಬಿಕ್ಕಟ್ಟಿನ ಸುಳಿಯಲ್ಲಿ ಸಿಲುಕಿವೆ.
ಹಾರ್ಮುಜ್ ಅಸ್ತ್ರಕ್ಕೆ ತತ್ತರಿಸಿರುವ ಅಮೆರಿಕ ಈಗ ತನ್ನ ಕಾರ್ಯತಂತ್ರವನ್ನು ಬದಲಿಸಿದ್ದು, ಭಾರತಕ್ಕೆ ತೀರಾ ಹತ್ತಿರವಿರುವ ಮಲಕ್ಕಾ ಜಲಸಂಧಿಯತ್ತ ಮುಖ ಮಾಡಿದೆ.
ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಈ ನಡೆ ಜಾಗತಿಕ ಮಟ್ಟದಲ್ಲಿ ಭಾರಿ ಚರ್ಚೆಗೆ ನಾಂದಿ ಹಾಡಿದೆ. ಆಗ್ನೇಯ ಏಷ್ಯಾದ ಅತ್ಯಂತ ಕಿರಿದಾದ, ಸುಮಾರು 800 ಕಿ.ಮೀ ಉದ್ದದ ಮಲಕ್ಕಾ ಜಲಸಂಧಿಯು ವಿಶ್ವದ 40% ವ್ಯಾಪಾರವನ್ನು ನಿಯಂತ್ರಿಸುತ್ತದೆ. ಪ್ರತಿದಿನ 2 ಕೋಟಿ ಬ್ಯಾರೆಲ್‌ಗೂ ಅಧಿಕ ತೈಲ ಇಲ್ಲಿಂದಲೇ ಸಾಗಬೇಕಿದೆ. ಚೀನಾ, ಜಪಾನ್ ಮತ್ತು ಭಾರತದಂತಹ ಬಲಿಷ್ಠ ಆರ್ಥಿಕತೆಗಳ ಜೀವನಾಡಿಯಾಗಿರುವ ಈ ಮಾರ್ಗದ ಮೇಲೆ ಅಮೆರಿಕದ ವಕ್ರದೃಷ್ಟಿ ಬಿದ್ದಿರುವುದು, ಮುಂದಿನ ದಿನಗಳಲ್ಲಿ ಜಾಗತಿಕ ವಾಣಿಜ್ಯ ವ್ಯವಹಾರದ ಮೇಲೆ ಯಾವ ರೀತಿಯ ಪರಿಣಾಮ ಬೀರಬಹುದು ಎಂಬ ಆತಂಕ ಸೃಷ್ಟಿಸಿದೆ.



