October 10, 2026
Saturday, October 10, 2026
spot_img

ಭಾರತೀಯ ಪೈಲಟ್ ಹ*ತ್ಯೆಗೆ ಯತ್ನ: ಫ್ಲೈದುಬೈ ಪ್ರಕರಣದ ತನಿಖೆ NIA ಹೆಗಲಿಗೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಫ್ಲೈದುಬೈ ವಿಮಾನದಲ್ಲಿ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರ ಮೇಲೆ ನಡೆದಿದೆಯೆನ್ನಲಾದ ದಾಳಿಯ ಪ್ರಕರಣವನ್ನು ಕೇಂದ್ರ ಸರ್ಕಾರ NIAಗೆ ವಹಿಸಿದೆ. ವಿಮಾನವನ್ನು ಅಪಹರಿಸಲು ಅಥವಾ ಪತನಗೊಳಿಸಲು ಯತ್ನ ನಡೆದಿರಬಹುದೆಂಬ ಶಂಕೆಯ ಹಿನ್ನೆಲೆಯಲ್ಲಿ ಪ್ರಕರಣದ ಹಿಂದಿರುವ ಸಂಪೂರ್ಣ ಸಂಗತಿಗಳು ಹಾಗೂ ಸಂಭಾವ್ಯ ಸಂಚಿನ ಬಗ್ಗೆ ತನಿಖೆ ನಡೆಸುವಂತೆ ಸೂಚಿಸಲಾಗಿದೆ.

ಏನಿದು ಘಟನೆ?

ಕೇಂದ್ರ ಸರ್ಕಾರದ ಆದೇಶದಲ್ಲಿ ಉಲ್ಲೇಖಿಸಿರುವ ಮಾಹಿತಿಯ ಪ್ರಕಾರ, ಫ್ಲೈದುಬೈಯ ಎಫ್‌ಝಡ್‌ 1073 ವಿಮಾನವು ಸೆಪ್ಟೆಂಬರ್‌ 30ರಂದು ದುಬೈನಿಂದ 174 ಪ್ರಯಾಣಿಕರು ಮತ್ತು ಆರು ಸಿಬ್ಬಂದಿಯೊಂದಿಗೆ ಪ್ರಯಾಣ ಆರಂಭಿಸಿತ್ತು. ವಿಮಾನವನ್ನು ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಹಾಗೂ ಓಮನ್‌ನ ಸಹಪೈಲಟ್‌ ನಿರ್ವಹಿಸುತ್ತಿದ್ದರು.

ಇದನ್ನೂ ಓದಿ:

ಜೋರ್ಡನ್‌–ಸೌದಿ ಅರೇಬಿಯಾ ಗಡಿಯ ಸಮೀಪ ಹಾರಾಟ ನಡೆಸುತ್ತಿದ್ದಾಗ ವಿಮಾನವು ಏಕಾಏಕಿ ಕೆಳಮುಖವಾಗಿ ಚಲಿಸಿ, ಮತ್ತೆ ಸೌದಿ ಅರೇಬಿಯಾದ ವಾಯುಪ್ರದೇಶದತ್ತ ತಿರುಗಿದೆ ಎನ್ನಲಾಗಿದೆ. ಈ ಸಂದರ್ಭದಲ್ಲಿ ಕಾಕ್‌ಪಿಟ್‌ನಲ್ಲಿ ನಡೆದ ದಾಳಿಯ ವೇಳೆ ಸಹಪೈಲಟ್‌ ಭಾರತೀಯ ಪೈಲಟ್‌ಗೆ ಚಾಕುವಿನಿಂದ ಇರಿದಿದ್ದಾರೆ ಎಂದು ಪ್ರಯಾಣಿಕರು ವರದಿ ಮಾಡಿರುವುದಾಗಿ ಕೇಂದ್ರದ ಮಾಹಿತಿ ತಿಳಿಸಿದೆ.

ಪ್ರಯಾಣಿಕರು ಸಿಬ್ಬಂದಿಯಿಂದ ಆರೋಪಿಯ ನಿಯಂತ್ರಣ

ದಾಳಿಯಲ್ಲಿ ಕ್ಯಾಪ್ಟನ್ ಮಚ್ಚರ್ ಅವರ ತಲೆ ಹಾಗೂ ಕೈಗಳಿಗೆ ಗಂಭೀರ ಗಾಯಗಳಾಗಿವೆ ಎಂದು ವರದಿಯಾಗಿದೆ. ಬಳಿಕ ಪ್ರಯಾಣಿಕರು ಮತ್ತು ಸಿಬ್ಬಂದಿ ಸಹಪೈಲಟ್‌ನನ್ನು ನಿಯಂತ್ರಣಕ್ಕೆ ಪಡೆದು ಬಂಧನದಲ್ಲಿಟ್ಟಿದ್ದಾರೆ ಎನ್ನಲಾಗಿದೆ. ವಿಮಾನದಲ್ಲಿದ್ದ ಇತರ ಫ್ಲೈದುಬೈ ಪೈಲಟ್‌ಗಳು ನಿಯಂತ್ರಣ ವಹಿಸಿಕೊಂಡು, ಸೌದಿ ಅರೇಬಿಯಾದ ತಬುಕ್‌ನಲ್ಲಿರುವ ಪ್ರಿನ್ಸ್ ಸುಲ್ತಾನ್ ಬಿನ್ ಅಬ್ದುಲಅಜೀಜ್ ವಿಮಾನ ನಿಲ್ದಾಣದಲ್ಲಿ ವಿಮಾನವನ್ನು ಸುರಕ್ಷಿತವಾಗಿ ಇಳಿಸಿದ್ದಾರೆ. ನಂತರ ಸೌದಿ ಅಧಿಕಾರಿಗಳು ಆರೋಪಿಯನ್ನು ಬಂಧಿಸಿದ್ದಾರೆ ಎಂದು ಕೇಂದ್ರ ಸರ್ಕಾರದ ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಸಂಭಾವ್ಯ ಸಂಚಿನ ಆಯಾಮಗಳ ಪರಿಶೀಲನೆ

ಭಾರತೀಯ ಪ್ರಜೆಯ ಮೇಲಿನ ದಾಳಿ ಹಾಗೂ ವಿಮಾನ ಅಪಹರಣಕ್ಕೆ ಯತ್ನ ನಡೆದಿರಬಹುದಾದ ಪ್ರಕರಣದಲ್ಲಿ ಗಂಭೀರ ಅಪರಾಧಗಳ ಅಂಶಗಳಿರುವುದರಿಂದ, ರಾಷ್ಟ್ರೀಯ ತನಿಖಾ ಸಂಸ್ಥೆ ಕಾಯ್ದೆಯಡಿ ಪ್ರಕರಣ ದಾಖಲಿಸಿ ತನಿಖೆ ನಡೆಸಲು ಕೇಂದ್ರ ಸರ್ಕಾರ ನಿರ್ದೇಶನ ನೀಡಿದೆ. ತನಿಖೆಯಲ್ಲಿ ವಿಮಾನದೊಳಗೆ ನಡೆದ ಘಟನೆಗಳು, ದಾಳಿಯ ಹಿಂದಿನ ಉದ್ದೇಶ ಮತ್ತು ಇದರ ಹಿಂದೆ ದೊಡ್ಡ ಸಂಚು ಇದೆಯೇ ಎಂಬುದನ್ನು ಪರಿಶೀಲಿಸುವ ನಿರೀಕ್ಷೆಯಿದೆ.

Must Read