ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಒಂದೆಡೆ ಮೊದಲ ಹಂತದ ಮತದಾನ ನಡೆಯುತ್ತಿದ್ದರೆ, ಮತ್ತೊಂದೆಡೆ ಎರಡನೇ ಹಂತದ ಮತದಾನಕ್ಕೂ ಮುನ್ನ ಪ್ರಧಾನಿ ಮೋದಿ ಅವರು ಬಿಜೆಪಿ ಅಭ್ಯರ್ಥಿಗಳ ಪರ ಬಿರುಸಿನ ಪ್ರಚಾರ ನಡೆಸಿದರು.
ಬಂಗಾಳದ ಕೃಷ್ಣಾನಗರ ಜಿಲ್ಲೆಯಲ್ಲಿ ಇಂದು ಸಭೆಯನ್ನುದ್ದೇಶಿಸಿ ಮಾತನಾಡಿರುವ ಅವರು, ಈ ಬಾರಿ ಬಂಗಾಳದಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ. ಅಂದು ನಾವು ಎಲ್ಲರು ಜೊತೆ ಸೇರಿ ಸಿಹಿ ಹಂಚೋಣ. ಜೊತೆಗೆ ಈ ಬಾರಿ ಝಲ್ಮುರಿಯನ್ನು ಹಂಚುತ್ತೇವೆ. ಈ ಮೂಲಕ ಸಂಭ್ರಮಿಸೋಣ ಎಂದು ಹೇಳಿದರು.
ಈ ಬಾರಿ ಜನರು ಹೊಸ ಬಂಗಾಳವನ್ನು ನೋಡಲು ಬಯಸುತ್ತಾರೆ. ದೀದಿ ಸರಕಾರದ ಭ್ರಷ್ಟಾಚಾರದ ಆಡಳಿತಕ್ಕೆ ಅಂತ್ಯ ಹಾಡಲು ಜನತೆ ತುದಿ ಕಾಲಲ್ಲಿ ನಿಂತಿದ್ದಾರೆ. ಈ ಮೂಲಕ ಖಂಡಿತ ಸೋನಾರ್ ಬಂಗಾಳ ನಿರ್ಮಾಣದ ಕನಸು, ನನಸಾಗುವ ಸಮಯ ಬಂದಿದೆ ಎಂದು ಪ್ರಧಾನಿ ಮೋದಿ ವಿಶ್ವಾಸ ವ್ಯಕ್ತಪಡಿಸಿದರು.
ಇಲ್ಲಿ ಕಳೆದ ಹದಿನೈದು ವರ್ಷಗಳಿಂದ ಆಡಳಿತ ನಡೆಸುತ್ತಿರುವ ದೀದಿ ಸರಕಾರ ಜನತೆಯ ಒಳಿತನ್ನು ಬಯಸದೆ ಕೇವಲ ಸ್ವಾರ್ಥಕ್ಕಾಗಿ ಲೂಟಿ ಮಾಡಿದೆ. ಆದರೆ ಆ ದಿನಗಳು ಕೊನೆಯಾಗುವ ಕ್ಷಣ ಹತ್ತಿರ ಬಂದಿದೆ. ಇಲ್ಲಿ ಸೇರಿರುವ ಜನಸಾಗರವೇ ನಮಗೆ ಮುನ್ಸೂಚನೆ ನೀಡುತ್ತಿದೆ. ಈ ಬಾರಿ ಖಂಡಿತ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ತಿಳಿಸಿದರು.



