ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಮೆರಿಕದ ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯವು ಐತಿಹಾಸಿಕವಾಗಿ 94ರ ಗಡಿ ದಾಟಿದ್ದರೂ, ಈ ಕುರಿತು ದೇಶದ ನಾಗರಿಕರು ಆತಂಕಪಡುವ ಅಗತ್ಯವಿಲ್ಲ ಎಂದು ಭಾರತ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರ ವಿ. ಅನಂತ ನಾಗೇಶ್ವರನ್ ತಿಳಿಸಿದ್ದಾರೆ. ಭಾರತದ ಆರ್ಥಿಕತೆಯ ಅಡಿಪಾಯ ಸದೃಢವಾಗಿದ್ದು, ಪ್ರಸ್ತುತ ಕಾಣಿಸುತ್ತಿರುವ ಕುಸಿತವು ಕೇವಲ ತಾತ್ಕಾಲಿಕ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ ವಿದ್ಯಮಾನಗಳು ರೂಪಾಯಿಯ ಮೇಲೆ ಒತ್ತಡ ಹೇರುತ್ತಿವೆ ಎಂದು ಅವರು ವಿವರಿಸಿದ್ದಾರೆ
ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಯುದ್ಧದ ಕಾರ್ಮೋಡಗಳು ಜಾಗತಿಕ ಮಾರುಕಟ್ಟೆಯಲ್ಲಿ ಅಸ್ಥಿರತೆ ಉಂಟುಮಾಡಿದೆ. ತೈಲ ಬೆಲೆ ಪ್ರತಿ ಬ್ಯಾರೆಲ್‌ಗೆ 100 ಡಾಲರ್ ತಲುಪಿರುವುದು ಆಮದು ವೆಚ್ಚವನ್ನು ಹೆಚ್ಚಿಸಿದೆ.
ವಿದೇಶಿ ಸಾಂಸ್ಥಿಕ ಹೂಡಿಕೆದಾರರು ತಮ್ಮ ಬಂಡವಾಳವನ್ನು ಭಾರತದ ಮಾರುಕಟ್ಟೆಯಿಂದ ಹಿಂತೆಗೆದುಕೊಳ್ಳುತ್ತಿರುವುದು ಕರೆನ್ಸಿ ಮೌಲ್ಯದ ಮೇಲೆ ಪರಿಣಾಮ ಬೀರಿದೆ.
ಪ್ರಸ್ತುತ ರೂಪಾಯಿ ಮೌಲ್ಯವು ಅದರ ನೈಜ ಸಾಮರ್ಥ್ಯಕ್ಕಿಂತ ಕಡಿಮೆಯಿದೆ. ಇದು ವಿದೇಶಿ ಹೂಡಿಕೆದಾರರಿಗೆ ಭಾರತೀಯ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಪ್ರಶಸ್ತವಾದ ಸಮಯವಾಗಿದೆ. “ಭಾರತದ ಆರ್ಥಿಕ ಶಕ್ತಿಯ ನೈಜ ಪ್ರತಿಬಿಂಬ ಪ್ರಸ್ತುತ ಮೌಲ್ಯದಲ್ಲಿ ಕಾಣಿಸುತ್ತಿಲ್ಲ, ಆದ್ದರಿಂದ ಹೂಡಿಕೆದಾರರು ಈ ಅವಕಾಶವನ್ನು ಬಳಸಿಕೊಳ್ಳಬಹುದು,” ಎಂದು ನಾಗೇಶ್ವರನ್ ಅಭಿಪ್ರಾಯಪಟ್ಟಿದ್ದಾರೆ.
ರೂಪಾಯಿ ಕುಸಿತದಿಂದ ಕೇವಲ ನಷ್ಟ ಮಾತ್ರವಲ್ಲ, ಕೆಲವು ಲಾಭಗಳೂ ಇವೆ ಎಂಬುದು ತಜ್ಞರ ಅನಿಸಿಕೆ. ರೂಪಾಯಿ ಮೌಲ್ಯ ಕಡಿಮೆಯಾದಾಗ ಭಾರತೀಯ ಉತ್ಪನ್ನಗಳು ಜಾಗತಿಕವಾಗಿ ಅಗ್ಗವಾಗುತ್ತವೆ, ಇದು ರಫ್ತುದಾರರಿಗೆ ಹೆಚ್ಚಿನ ಲಾಭ ತಂದುಕೊಡುತ್ತದೆ. ಅಗತ್ಯವಿಲ್ಲದ ಐಷಾರಾಮಿ ವಸ್ತುಗಳು ಮತ್ತು ಚಿನ್ನದ ಆಮದು ನಿಯಂತ್ರಣಕ್ಕೆ ಬರಲು ಇದು ಸಹಕಾರಿ.ಭಾರತವು ಬಲಿಷ್ಠವಾದ ವಿದೇಶಿ ವಿನಿಮಯ ನಿಧಿಯನ್ನು ಹೊಂದಿದ್ದು, ಯಾವುದೇ ತುರ್ತು ಪರಿಸ್ಥಿತಿಯನ್ನು ಎದುರಿಸಲು ಸನ್ನದ್ಧವಾಗಿದೆ.
“ಜಾಗತಿಕವಾಗಿ ಡಾಲರ್ ಬಲಗೊಳ್ಳುತ್ತಿರುವುದರಿಂದ ಏಷ್ಯಾದ ಬಹುತೇಕ ಕರೆನ್ಸಿಗಳು ಕುಸಿತ ಕಂಡಿವೆ. ಇದು ಭಾರತಕ್ಕೆ ಮಾತ್ರ ಸೀಮಿತವಲ್ಲ. ಮುಂದಿನ ವರ್ಷದ ವೇಳೆಗೆ ರೂಪಾಯಿ ಮತ್ತೆ ಸ್ಥಿರಗೊಳ್ಳಲಿದೆ,” ಎಂದು ಅವರು ಭರವಸೆ ನೀಡಿದ್ದಾರೆ.



