November 3, 2026
Tuesday, November 3, 2026
spot_img

ಪಂಚಕುಲ ಶಾಲೆಯಲ್ಲಿ ದಾಳಿ : ಬಾಲಕಿ ಆರೋಗ್ಯದಲ್ಲಿ ಸುಧಾರಣೆ, ನೋವಿನಲ್ಲೂ ನಗುತ್ತಿರುವ ಕಂದಮ್ಮ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಹರಿಯಾಣದ ಪಂಚಕುಲ ಸಂಸ್ಕೃತಿ ಮಾಡೆಲ್‌ ಶಾಲೆಯಲ್ಲಿ ಮೂರನೇ ತರಗತಿ ಬಾಲಕನಿಂದ ಹಲ್ಲೆಗೊಳಗಾಗಿದ್ದ ಪುಟ್ಟ ಕಂದಮ್ಮನ ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿದೆ. ಮಗು ತನ್ನ ಗೊಂಬೆಯನ್ನು ಕೈಯಲ್ಲಿ ಹಿಡಿದುಕೊಂಡು ನಗುತ್ತಿರುವ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಸ್ವಲ್ಪ ಮಟ್ಟಿಗಿನ ನೆಮ್ಮದಿ ಸಿಕ್ಕಿದೆ ಎಂದು ನೆಟ್ಟಿಗರು ಹೇಳುತ್ತಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಜನರು ಮಗುವಿನ ಫೋಟೊ ಹಂಚಿಕೊಂಡಿದ್ದು, ಈ ಕಂದನಿಗೆ ದೇವರು ಜೀವನವಿಡೀ ಖುಷಿಯನ್ನೇ ನೀಡಲಿ. ಅವಳ ಆರೋಗ್ಯ ಯಾವಾಗಲೂ ಚೆನ್ನಾಗಿರಲಿ. ಎಣಿಸಲಾರದಷ್ಟು ಖುಷಿಯ ಕ್ಷಣಗಳು ಆಕೆಯ ಬದುಕನ್ನು ತುಂಬಲಿ. ಪ್ರೀತಿ, ನಂಬಿಕೆಯ ಜಗತ್ತಿನಲ್ಲಿ ಬದುಕಲಿ ಎಂದು ಹೇಳಿಕೊಂಡಿದ್ದಾರೆ. ಅಂತೆಯೇ ಮಗುವನ್ನು ಈ ಸ್ಥಿತಿಗೆ ತಂದಿರುವ ಬಾಲಕನಿಗೆ ಶಿಕ್ಷೆಯಾಗಬೇಕು. ಹೊಡೆದು ಬಡಿದು ಕೊಡುವ ಶಿಕ್ಷೆಯ ಜೊತೆ ಆತನ ಮನಸ್ಸಿಗೆ ತಾನು ಮಾಡಿದ್ದು ಏನು ಎನ್ನುವುದು ಅರ್ಥವಾಗುವಂತೆ ಮಾಡಬೇಕು ಎಂದು ಹೇಳಿದ್ದಾರೆ.

ಘಟನೆ ಹಿನ್ನೆಲೆ ಏನು?

ಅ.28ರಂದು ಸೆಕ್ಟರ್ 20ರ ಸರ್ಕಾರಿ ಶಾಲೆಯಲ್ಲಿ ಮೂರನೇ ತರಗತಿ ಓದುತ್ತಿದ್ದ ಬಾಲಕನೊಬ್ಬ ಎಲ್‌ಕೆಜಿ ಓದುತ್ತಿದ್ದ ಬಾಲಕಿಗೆ ನಿನ್ನ ತಂದೆ ಬಂದಿದ್ದಾರೆ ಬಾ ಎಂದು ನಂಬಿಸಿ ಖಾಲಿ ಕೊಠಡಿಗೆ ಕರೆದುಕೊಂಡು ಹೋಗಿದ್ದ. ಅಲ್ಲಿ ಆಕೆಯ ಮೇಲೆ ಮನಸ್ಸಿಗೆ ಬಂದಂತೆ ಹಲ್ಲೆ ಮಾಡಿದ್ದ. ಡೆಸ್ಕ್‌ಗೆ ತಲೆಯನ್ನು ಬಡಿದು, ಹೂವಿನ ಕುಂಡದಿಂದ ತಲೆಗೆ ಹೊಡೆದಿದ್ದ. ಆಕೆ ಪ್ರಜ್ಞೆ ತಪ್ಪಿ ಬಿದ್ದರೂ ಮತ್ತೆ ಮತ್ತೆ ಹೊಡೆದಿದ್ದ. ನಂತರ ಆಕೆ ಸತ್ತುಹೋದಳು ಎಂದು ತಿಳಿದುಕೊಂಡು ಆಕೆಯ ತಂದೆಯ ಬಳಿ ಹೋಗಿ ನಿಮ್ಮ ಮಗಳನ್ನು ಸ್ನೇಹಿತರೆಲ್ಲ ಸೇರಿ ಹೊಡೆದಿದ್ದಾರೆ ಎಂದು ನಾಟಕವಾಡಿದ್ದ. ಬರೀ ಎಂಟು ವರ್ಷದ ಬಾಲಕನಿಗೆ ಇಷ್ಟೆಲ್ಲಾ ಚಾಲಾಕಿತನ? ಬೇರೆಯವರಿಗೆ ಹೊಡೆದು ಖುಷಿ ಪಡುವ ಕ್ರೂರ ಬುದ್ಧಿ ಹೇಗೆ ಬಂತು ಎಂದು ಜನ ಆಂತಕಕ್ಕೀಡಾಗಿದ್ದರು.

ಜನರ ಅಭಿಪ್ರಾಯ ಹೀಗಿದೆ..

ಹೊಡೆಯುವ ಬಡಿಯುವ ಆಟಗಳು, ಮಕ್ಕಳ ಕೈಯಲ್ಲಿ ಫೋನ್‌ ಕೊಡುವುದು ಬ್ಯಾನ್‌ ಆಗಬೇಕು. ನಮ್ಮ ಮಕ್ಕಳನ್ನು ನಾವು ಸರಿಯಾಗಿ ಬೆಳೆಸುತ್ತೇವೆ. ಆದರೆ ಸಮಾಜದಲ್ಲಿರುವ ಇಂತಹ ಕೆಟ್ಟ ಮಕ್ಕಳ ಕೈಯಿಂದ ಕಾಪಾಡಿಕೊಳ್ಳೋದು ಹೇಗೆ ಎಂದು ಜನ ಪ್ರಶ್ನಿಸಿದ್ದಾರೆ. ಆ ಬಾಲಕನನ್ನು ಸುಮ್ಮನೆ ಬಿಡಬೇಡಿ. ಆತನಿಗೆ ಶಿಕ್ಷೆ ಆಗಬೇಕು. ತಪ್ಪಿನ ಅರಿವಾಗಬೇಕು. ಈ ಶಾಲೆಗೆ ಮಕ್ಕಳನ್ನು ಸೇರಿಸಬಾರದು. ಶಿಕ್ಷಕರು, ಸೆಕ್ಯುರಿಟಿ ಇದ್ದರೂ ಈ ರೀತಿ ಆಗಿದ್ದು ದುರಾದೃಷ್ಟಕರ ಎಂದಿದ್ದಾರೆ.

Must Read