June 25, 2026
Thursday, June 25, 2026
spot_img

ಚಿಂಚೋಳಿ-ತೆಲಂಗಾಣ ಹೆದ್ದಾರಿಯಲ್ಲಿ ಭೀಕರ ಸರಣಿ ಅಪಘಾತ: 10 ಮಂದಿಗೆ ಗಾಯ, ಓರ್ವ ಗಂಭೀರ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಚಿಂಚೋಳಿ-ತೆಲಂಗಾಣ ರಾಜ್ಯ ಹೆದ್ದಾರಿಯಲ್ಲಿ ಇಂದು ಮಧ್ಯಾಹ್ನ ಭೀಕರ ಸರಣಿ ಅಪಘಾತ ಸಂಭವಿಸಿದೆ. ಸಿಮೆಂಟ್ ಟ್ಯಾಂಕರ್, ಖಾಸಗಿ ಬಸ್ ಮತ್ತು ಆಟೋ ರಿಕ್ಷಾ ನಡುವೆ ನಡೆದ ಈ ತ್ರಿಕೋನ ಸಂಘರ್ಷದಲ್ಲಿ ಒಟ್ಟು 10 ಜನರು ಗಾಯಗೊಂಡಿದ್ದು, ಒಬ್ಬರ ಸ್ಥಿತಿ ಅತ್ಯಂತ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ.

ಪ್ರತ್ಯಕ್ಷದರ್ಶಿಗಳ ಮಾಹಿತಿ ಮತ್ತು ಪೊಲೀಸ್ ಮೂಲಗಳ ಪ್ರಕಾರ, ತೆಲಂಗಾಣದ ತಾಂಡೂರು ಕಡೆಯಿಂದ ಚಿಂಚೋಳಿ ಕಡೆಗೆ ವೇಗವಾಗಿ ಬರುತ್ತಿದ್ದ ಸಿಮೆಂಟ್ ಟ್ಯಾಂಕರ್, ತನ್ನ ಮುಂದಿದ್ದ ಆಟೋಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಯತ್ನಿಸಿದೆ. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಟ್ಯಾಂಕರ್, ಚಿಂಚೋಳಿಯಿಂದ ವೆಂಕಟಾಪುರದತ್ತ ತೆರಳುತ್ತಿದ್ದ ಖಾಸಗಿ ಬಸ್ಸಿಗೆ ಮುಖಾಮುಖಿಯಾಗಿ ಡಿಕ್ಕಿ ಹೊಡೆದಿದೆ.

ಟ್ಯಾಂಕರ್ ಮತ್ತು ಬಸ್ ನಡುವಿನ ಡಿಕ್ಕಿಯ ರಭಸಕ್ಕೆ ಸಮೀಪದಲ್ಲಿದ್ದ ಆಟೋ ಕೂಡ ಜಖಂಗೊಂಡಿದ್ದು, ಒಟ್ಟಾರೆ ಹತ್ತು ಮಂದಿ ಪ್ರಯಾಣಿಕರು ಗಾಯಾಳುಗಳಾಗಿದ್ದಾರೆ.

ಘಟನೆ ಸಂಭವಿಸಿದ ಕೂಡಲೇ ಸ್ಥಳೀಯರು ಗಾಯಾಳುಗಳನ್ನು ರಕ್ಷಿಸಿ, ಚಿಕಿತ್ಸೆಗಾಗಿ ಚಿಂಚೋಳಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ವ್ಯಕ್ತಿಗೆ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಚಿಂಚೋಳಿ ಪೊಲೀಸ್ ಠಾಣೆಯ ಅಧಿಕಾರಿಗಳು ಪರಿಶೀಲನೆ ನಡೆಸಿದ್ದು, ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !