ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಸಿಇಟಿ ಪರೀಕ್ಷೆಯ ಸಂದರ್ಭದಲ್ಲಿ ವಿದ್ಯಾರ್ಥಿಯೊಬ್ಬನ ‘ಜನಿವಾರ’ ತೆಗೆಸಿರುವ ಘಟನೆ ಈಗ ರಾಜಕೀಯ ಸ್ವರೂಪ ಪಡೆದುಕೊಂಡಿದೆ. ಈ ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಪ್ರತಿಪಕ್ಷ ನಾಯಕ ಆರ್. ಅಶೋಕ್, ಇದು ಕಾಂಗ್ರೆಸ್ ಸರ್ಕಾರದ ಕುಮ್ಮಕ್ಕಿನಿಂದಲೇ ನಡೆಯುತ್ತಿರುವ ಕೃತ್ಯ ಎಂದು ನೇರ ಆರೋಪ ಮಾಡಿದ್ದಾರೆ.
ಬೆಂಗಳೂರು ಪೊಲೀಸ್ ಆಯುಕ್ತರನ್ನು ಭೇಟಿ ಮಾಡಿ ತಪ್ಪಿತಸ್ಥ ಸಿಬ್ಬಂದಿಗಳ ಬಂಧನಕ್ಕೆ ಆಗ್ರಹಿಸಿದ ಬಳಿಕ ಮಾತನಾಡಿದ ಅವರು, ಹಿಂದೂ ಸಂಪ್ರದಾಯದ ಮೇಲೆ ಸತತವಾಗಿ ದೌರ್ಜನ್ಯ ನಡೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಜನಿವಾರ ಎಂಬುದು ಹಿಂದೂಗಳ ಭಾವನೆಯ ಸಂಕೇತ. ಕೇವಲ ತಂದೆ-ತಾಯಿ ನಿಧನರಾದಾಗ ಮಾತ್ರ ಜನಿವಾರ ತೆಗೆಯುವ ಸಂಪ್ರದಾಯವಿದೆ. ಆದರೆ ಪರೀಕ್ಷೆಗೆ ಹೋದ ವಿದ್ಯಾರ್ಥಿಯ ಜನಿವಾರ ತೆಗೆಸಿರುವುದು ಆತನ ಮಾನಸಿಕ ಸ್ಥಿತಿಯ ಮೇಲೆ ಕೆಟ್ಟ ಪರಿಣಾಮ ಬೀರಿದೆ. ಹೈಕೋರ್ಟ್ ಆದೇಶವಿದ್ದರೂ ಸಹ ಸರ್ಕಾರ ಇಂತಹ ತಪ್ಪುಗಳನ್ನು ಎಸಗುತ್ತಿದೆ” ಎಂದು ಅಶೋಕ್ ಕಿಡಿಕಾರಿದರು.
ಪದ್ಮನಾಭನಗರ ಕ್ಷೇತ್ರದ ವಿದ್ಯಾರ್ಥಿಯೊಬ್ಬ ಸಿಇಟಿ ಪರೀಕ್ಷೆಗೆ ಹೋದಾಗ, ಅಲ್ಲಿನ ಮೂವರು ಸಿಬ್ಬಂದಿಗಳು ಜನಿವಾರ ತೆಗೆಯುವಂತೆ ಒತ್ತಾಯಿಸಿದ್ದಾರೆ. ಇದು ಸಂಪ್ರದಾಯದ ಭಾಗ ಎಂದು ವಿದ್ಯಾರ್ಥಿ ಮನವಿ ಮಾಡಿದರೂ ಕೇಳದ ಸಿಬ್ಬಂದಿ ದೌರ್ಜನ್ಯ ಎಸಗಿದ್ದಾರೆ ಎಂಬುದು ಅಶೋಕ್ ಅವರ ಆರೋಪ.



