July 10, 2026
Friday, July 10, 2026
spot_img

ನಾಡಹಬ್ಬ ದಸರಾಗೆ ಮುಹೂರ್ತ ಫಿಕ್ಸ್: ಅಕ್ಟೋಬರ್ 11ಕ್ಕೆ ಉದ್ಘಾಟನೆ, 21ಕ್ಕೆ ಅದ್ಧೂರಿ ಜಂಬೂಸವಾರಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಜಗತ್ಪ್ರಸಿದ್ಧ ಮೈಸೂರು ದಸರಾ ಮಹೋತ್ಸವದ ಆಚರಣೆಗೆ ಮುಹೂರ್ತ ಅಧಿಕೃತವಾಗಿ ಫಿಕ್ಸ್ ಆಗಿವೆ. ಉನ್ನತ ಮಟ್ಟದ ಸಮಿತಿ ಸಭೆಯ ಬಳಿಕ ಜಂಟಿ ಮಾಹಿತಿ ನೀಡಿರುವ ಸರ್ಕಾರ, ಅಕ್ಟೋಬರ್ 11 ರಂದು ಚಾಮುಂಡಿ ಬೆಟ್ಟದಲ್ಲಿ ನವರಾತ್ರಿ ಉತ್ಸವಕ್ಕೆ ಚಾಲನೆ ಸಿಗಲಿದ್ದು, ಅಕ್ಟೋಬರ್ 21 ರಂದು ವಿಜಯದಶಮಿಯ ಅದ್ದೂರಿ ಜಂಬೂಸವಾರಿ ಮೆರವಣಿಗೆ ಜರುಗಲಿದೆ ಎಂದು ದಸರಾ ಮಹೋತ್ಸವದ ಸಿದ್ಧತೆಗಳ ಕುರಿತು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಇಂದು ನಡೆದ ಉನ್ನತ ಮಟ್ಟದ ಪರಿಶೀಲನಾ ಸಭೆಯಲ್ಲಿ ಪ್ರಕಟಿಸಲಾಗಿದೆ.

ದಸರಾ ಉದ್ಘಾಟನೆ ಮತ್ತು ಜಂಬೂಸವಾರಿ ಮುಹೂರ್ತದ ವಿವರಗಳು:

ಉದ್ಘಾಟನೆ: ಅಕ್ಟೋಬರ್ 11ರಂದು ಬೆಳಿಗ್ಗೆ ಚಾಮುಂಡಿಬೆಟ್ಟದಲ್ಲಿ ನಾಡ ಅಧಿದೇವತೆ ತಾಯಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ದಸರಾ ಉತ್ಸವಕ್ಕೆ ಚಾಲನೆ ದೊರೆಯಲಿದೆ.

ನಂದಿ ಧ್ವಜ ಪೂಜೆ: ವಿಜಯದಶಮಿಯ ದಿನವಾದ ಅಕ್ಟೋಬರ್ 21ರಂದು ಮಧ್ಯಾಹ್ನ 1.36ರಿಂದ 1.56ರ ನಡುವೆ ಬರುವ ಶುಭ ಮಕರ ಲಗ್ನದಲ್ಲಿ ನಂದಿ ಧ್ವಜಕ್ಕೆ ಶಾಸ್ತ್ರೋಕ್ತವಾಗಿ ಪೂಜೆ ನೆರವೇರಲಿದೆ.

ಚಿನ್ನದ ಅಂಬಾರಿ ಪುಷ್ಪಾರ್ಚನೆ: ಅದೇ ದಿನ ಸಂಜೆ 4.10ರಿಂದ 4.35ರ ನಡುವಿನ ಶುಭ ಮೀನ ಲಗ್ನದಲ್ಲಿ ಮೈಸೂರು ಅರಮನೆ ಆವರಣದಲ್ಲಿ 750 ಕೆಜಿ ತೂಕದ ಚಿನ್ನದ ಅಂಬಾರಿಯಲ್ಲಿ ವಿರಾಜಮಾನಳಾಗಲಿರುವ ತಾಯಿ ಚಾಮುಂಡೇಶ್ವರಿಗೆ ಮುಖ್ಯಮಂತ್ರಿಗಳು ಪುಷ್ಪಾರ್ಚನೆ ಮಾಡುವ ಮೂಲಕ ಜಂಬೂಸವಾರಿಗೆ ಅಧಿಕೃತ ಚಾಲನೆ ನೀಡಲಿದ್ದಾರೆ.

ಜುಲೈ 26 ರಿಂದಲೇ ‘ಗಜಪಯಣ’ ಆರಂಭ!

ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಗಜಪಡೆಗಳ ಆಗಮನಕ್ಕೆ ದಿನಾಂಕ ನಿಗದಿಯಾಗಿದೆ. ಜುಲೈ 26 ರಂದು ಕಾಡಿನಿಂದ ನಾಡಿಗೆ ಬರುವ ಆನೆಗಳಿಗೆ ಸಾಂಪ್ರದಾಯಿಕ ಸ್ವಾಗತ ಕೋರುವ ಮೂಲಕ ‘ಗಜಪಯಣ’ ಅಧಿಕೃತವಾಗಿ ಆರಂಭಗೊಳ್ಳಲಿದೆ.

ಇದನ್ನೂ ಓದಿ:

ಈ ಬಾರಿಯ ವಿಶೇಷತೆಗಳೇನು?

ಈ ಬಾರಿಯ ದಸರಾ ಮಹೋತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲು ಸರ್ಕಾರ 45 ಕೋಟಿ ರೂ. ವಿಶೇಷ ಅನುದಾನ ಬಿಡುಗಡೆ ಮಾಡಲು ನಿರ್ಧರಿಸಿದೆ.

ಇನ್ನು, ಕರಾವಳಿಯ ಜಾನಪದ ಕ್ರೀಡೆಯಾದ ಕಂಬಳವನ್ನು ಈ ಬಾರಿ ಮೈಸೂರು ದಸರಾದಲ್ಲಿ 2 ದಿನಗಳ ಕಾಲ ಆಯೋಜಿಸಲು ಕಂಬಳ ಸಮಿತಿ ಮನವಿ ಮಾಡಿದ್ದು, ಇದಕ್ಕೆ ಸಭೆಯಲ್ಲಿ ಸಕಾರಾತ್ಮಕ ಚರ್ಚೆ ನಡೆದಿದೆ.

ಇಡೀ ಮೈಸೂರು ನಗರ ಹಾಗೂ ಪ್ರಮುಖ ವೃತ್ತಗಳಿಗೆ ಈ ಬಾರಿಯೂ ಕಣ್ಣು ಕೋರೈಸುವ ಆಕರ್ಷಕ ದೀಪಾಲಂಕಾರ ವ್ಯವಸ್ಥೆ ಇರಲಿದೆ.

ದಸರಾ ಮಹೋತ್ಸವವನ್ನು ಯಾರು ಉದ್ಘಾಟಿಸಬೇಕು ಎಂಬ ಗಣ್ಯರ ಹೆಸರನ್ನು ಮುಂಬರುವ ದಿನಗಳಲ್ಲಿ ಮುಖ್ಯಮಂತ್ರಿಗಳು ಅಂತಿಮಗೊಳಿಸಲಿದ್ದಾರೆವ ಎಂದು ತಿಳಿದುಬಂದಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !