April 27, 2026
Monday, April 27, 2026
spot_img

ಭಾರತ-ನ್ಯೂಜಿಲೆಂಡ್ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ: ಭಾರತೀಯ ವಸ್ತುಗಳಿಗೆ ಇನ್ಮುಂದೆ ಶೂನ್ಯ ಸುಂಕ ಪ್ರವೇಶ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತ ಹಾಗೂ ನ್ಯೂಜಿಲೆಂಡ್ ಇಂದು ಐತಿಹಾಸಿಕ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಮಾಡಿದೆ. ಈ ಮೂಲಕ ಬರೋಬ್ಬರಿ 15 ವರ್ಷಗಳ ಬಳಿಕ ದಿಟ್ಟ ಹೆಜ್ಜೆ ಇಡಲಾಗಿದೆ.

ದೆಹಲಿಯ ಭಾರತ್ ಮಂಟಪದಲ್ಲಿ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಮತ್ತು ನ್ಯೂಜಿಲೆಂಡ್‌ನ ವಾಣಿಜ್ಯ ಸಚಿವ ಟಾಡ್ ಮೆಕ್ಲೇ ಮಾತುಕತೆ ನಡೆಸಿ ಅಂತಿಮವಾಗಿ ಒಪ್ಪಂದಕ್ಕೆ ಸಹಿ ಹಾಕಿದರು. ಇದರಿಂದ ದೇಶದಲ್ಲಿ ರಫ್ತು ವಲಯ ಮತ್ತು ಸಣ್ಣ ಉದ್ದಿಮೆಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಪ್ರೋತ್ಸಾಹ ಸಿಗಲಿದೆ.

ಮುಕ್ತ ವ್ಯಾಪಾರ ಒಪ್ಪಂದದಿಂದಾಗಿ ಇನ್ಮುಂದೆ ನ್ಯೂಜಿಲೆಂಡ್‌ಗೆ ಭಾರತದಿಂದ ರಫ್ತಾಗುವ 100% ಸರಕುಗಳಿಗೆ ಸುಂಕ ಮುಕ್ತ ಸಿಗಲಿದೆ. ಜೊತೆಗೆ ನ್ಯೂಜಿಲೆಂಡ್‌ನಿಂದ ಬರುವ 95% ರಷ್ಟು ಸರಕುಗಳಿಗೆ ಭಾರತವು ಹಂತಹಂತವಾಗಿ ಸುಂಕವನ್ನು ಕಡಿಮೆ ಮಾಡಲಿದೆ.

ಇದರಿಂದಾಗಿ ಭಾರತದಿಂದ ಜವಳಿ, ಉಡುಪು, ಚರ್ಮ ವಸ್ತುಗಳು, ಪಾದರಕ್ಷೆಗಳು, ರತ್ನಗಳು ಮತ್ತು ಆಭರಣಗಳು, ಎಂಜಿನಿಯರಿಂಗ್, ಅಟೋಮೊಬೈಲ್‌ ಸರಕುಗಳು ಮತ್ತು ಕಡಲ ಉತ್ಪನ್ನಗಳಿಗೆ ಹೆಚ್ಚಿನ ಅವಕಾಶ ಸಿಗಲಿದೆ. ಅತ್ತ ನ್ಯೂಜಿಲೆಂಡಿನ ಭಾರತದತ್ತ ಬರುವ ಉಣ್ಣೆ, ಕಲ್ಲಿದ್ದಲು, ಮರ ಮತ್ತುಹಣ್ಣುಗಳ ಸುಲಭ ಎಂಟ್ರಿ ಸಿಗಲಿದೆ.

ಇದೇ ವೇಳೆ ಭಾರತೀಯ ವೃತ್ತಿಪರರಿಗೆ 5,000 ತಾತ್ಕಾಲಿಕ ಉದ್ಯೋಗ ವೀಸಾಗಳನ್ನು ನೀಡಲು ನ್ಯೂಜಿಲೆಂಡ್ ಸಮ್ಮತಿ ಸೂಚಿಸಿದೆ. ಈ ಮೂಲಕ 15 ವರ್ಷಗಳಲ್ಲಿ ಭಾರತಕ್ಕೆ ಸುಮಾರು 20 ಶತಕೋಟಿ ಡಾಲರ್ ವಿದೇಶಿ ನೇರ ಹೂಡಿಕೆ ಹರಿದುಬರುವ ನಿರೀಕ್ಷೆಯಿದೆ.

ಮತ್ತೊಂದೆಡೆ, ಭಾರತದ ಪ್ರಮುಖ ಸೂಕ್ಷ್ಮ ವಲಯಗಳ ರಕ್ಷಣೆಗೆ ಡೈರಿ ಉತ್ಪನ್ನಗಳು (ಹಾಲು, ಕೆನೆ, ಮೊಸರು, ಚೀಸ್)ಪ್ರಾಣಿ ಉತ್ಪನ್ನಗಳು ,ಸಕ್ಕರೆ, ಕೃತಕ ಜೇನುತುಪ್ಪ, ಪ್ರಾಣಿ, ತರಕಾರಿ ಅಥವಾ ಸೂಕ್ಷ್ಮಜೀವಿಯ ಕೊಬ್ಬುಗಳು ಮತ್ತು ಎಣ್ಣೆಗಳು, ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳು, ರತ್ನಗಳು ಮತ್ತು ಆಭರಣಗಳು,ಅಲ್ಯೂಮಿನಿಯಂ ಮತ್ತು ಅದರ ವಸ್ತುಗಳು ಮೊದಲಾದವುಗಳು ಒಪ್ಪಂದದಿಂದ ಹೊರಗಿಡಲಾಗಿದೆ.

ಇತ್ತ ಈ ಒಪ್ಪಂದವು ಕೂಡಲೇ ಜಾರಿಗೆ ಬರುವುದಿಲ್ಲ. ಬದಲಾಗಿ ಮುಂದಿನ ದಿನಗಳಲ್ಲಿ ನ್ಯೂಜಿಲೆಂಡ್‌ ಸಂಸತ್ತು ಅನುಮತಿ ನೀಡಬೇಕು. ಭಾರತದಲ್ಲಿ ಕೇಂದ್ರ ಸಚಿವ ಸಂಪುಟವು ಒಪ್ಪಿಗೆ ನೀಡಿದರೆ ಜಾರಿಯಾಗಲಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !