ಹೊಸದಿಗಂತ ಡಿಜಿಟಲ್ ಡೆಸ್ಕ್:
ಕನ್ನಡದ ಹೆಮ್ಮೆಯ ನಟ ಡಾ. ರಾಜ್‌ಕುಮಾರ್ ಅವರ ಪರಂಪರೆ ಮತ್ತು ಅವರ ಹೆಸರಿನ ಸುತ್ತ ಮೂಡಿದ ವಿವಾದ ಇದೀಗ ರಾಜಕೀಯ ವಲಯದಲ್ಲೂ ಚರ್ಚೆಗೆ ಕಾರಣವಾಗಿದೆ.
ನಟ ಹಾಗೂ ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ ಮಾಡಿದ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾಗಿದ್ದು, ಇದರ ಬೆನ್ನಲ್ಲೇ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡ ನಿಖಿಲ್, ಡಾ.ರಾಜ್‌ಕುಮಾರ್ ಕೇವಲ ಸಿನಿಮಾ ನಟರಲ್ಲ, ಕನ್ನಡಿಗರ ಮನಸ್ಸಿನಲ್ಲಿ ಅಚ್ಚಳಿಯದ ಸ್ಥಾನ ಪಡೆದ ಮಹನೀಯರು ಎಂದು ಹೇಳಿದ್ದಾರೆ. ಅವರ ಬಗ್ಗೆ ಮಾತನಾಡುವಾಗ ಗೌರವ ಮತ್ತು ಹೊಣೆಗಾರಿಕೆ ಇರಬೇಕು ಎಂದು ಸೂಚಿಸಿದ್ದಾರೆ. ಕನ್ನಡ ಭಾಷೆಯ ಗೌರವ ಹೆಚ್ಚಿಸಿದ ಗೋಕಾಕ್ ಚಳವಳಿಯಲ್ಲಿ ಅಣ್ಣಾವ್ರ ಪಾತ್ರವನ್ನು ನೆನಪಿಸಿದ ಅವರು, ಇತಿಹಾಸ ಅರಿತು ಮಾತಾಡುವುದು ಮುಖ್ಯ ಎಂದಿದ್ದಾರೆ.
ಇದನ್ನೂ ಓದಿ:
ಇದಕ್ಕೆ ಮೊದಲು ಚೇತನ್ ಅಹಿಂಸಾ, ಅಣ್ಣಾವ್ರ ಹೆಸರು ಹೇಳಲು ಯೋಗ್ಯರಲ್ಲ ಎಂಬ ನಿಖಿಲ್ ಕುಮಾರಸ್ವಾಮಿ ಪೋಸ್ಟ್ ಗೆ ಚುನಾವಣೆಯಲ್ಲಿ ಹಲವು ಬಾರಿ ಸೋತವರಿಗೆ ಇತರರನ್ನು ಪ್ರಶ್ನಿಸುವ ನೈತಿಕತೆ ಇದೆಯೇ ಎಂದು ಪ್ರಶ್ನಿಸಿ ಪ್ರತಿಕ್ರಿಯೆ ನೀಡಿದ್ದರು. ಈ ಹೇಳಿಕೆಗೆ ಉತ್ತರಿಸಿದ ನಿಖಿಲ್, ರಾಜಕೀಯ ಗೆಲುವು-ಸೋಲು ಜನರ ತೀರ್ಪು, ಆದರೆ ಸಮಾಜದಲ್ಲಿ ವಿಭಜನೆ ಉಂಟುಮಾಡುವ ಮಾತುಗಳು ಯಾವತ್ತೂ ಒಪ್ಪಲಾಗುವುದಿಲ್ಲ ಎಂದು ತಿರುಗೇಟು ನೀಡಿದ್ದಾರೆ. ಸಂಸ್ಕಾರದಿಂದ ಬಂದ ಟೀಕೆಗಳಿಗೆ ಮಾತ್ರ ಮೌಲ್ಯ ಇರುತ್ತದೆ, ಪ್ರಚಾರಕ್ಕಾಗಿ ಮಾಡುವ ಹೇಳಿಕೆಗಳಿಗೆ ಅಲ್ಲ. ನಿಮ್ಮ ಹೆಸರಿನಲ್ಲಿ ಅಹಿಂಸೆ ಇರಬಹುದು, ಆದರೆ ನಿಮ್ಮ ಪ್ರತಿಯೊಂದು ಮಾತೂ ಕನ್ನಡಿಗರ ಭಾವನೆಗಳಿಗೆ ಮಾಡುವ ಹಿಂಸೆ ಎಂದು ಅವರು ಹೇಳಿದ್ದಾರೆ.



