ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದ ಸ್ಟಾರ್ಟ್‌ಅಪ್ ಇಕೋ ಸಿಸ್ಟಮ್‌ಗಳಲ್ಲಿ ಬೆಂಗಳೂರು 2026ರ ಮೊದಲ ತ್ರೈಮಾಸಿಕದಲ್ಲಿ 89 ಒಪ್ಪಂದಗಳ ಮೂಲಕ 823 ಮಿಲಿಯನ್ ಡಾಲರ್ ನಿಧಿಯೊಂದಿಗೆ ತನ್ನ ನಾಯಕತ್ವವನ್ನು ಮುಂದುವರಿಸಿದೆ ಎಂದು ಮಾಹಿತಿ ಹಾಗೂ ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಬೆಂಗಳೂರಿನ ಸಾಧನೆಯನ್ನು ಭಾರತದ ಇತರ ಪ್ರಮುಖ ನಗರಗಳಿಗೆ ಹೋಲಿಸಿದರೆ, ದೆಹಲಿ 74 ಒಪ್ಪಂದಗಳಲ್ಲಿ 538 ಮಿಲಿಯನ್ ಡಾಲರ್ ಮತ್ತು ಮುಂಬೈ 34 ಒಪ್ಪಂದಗಳಲ್ಲಿ 402 ಮಿಲಿಯನ್ ಡಾಲರ್ ನಿಧಿಯನ್ನು ದಾಖಲಿಸಿವೆ. ಬೆಂಗಳೂರು ಇಂದು ಅಮೆರಿಕ, ಯುರೋಪ್ ಹಾಗೂ ಚೀನಾದ ಹೊರಗೆ ಅತಿದೊಡ್ಡ ಸ್ಟಾರ್ಟ್‌ಅಪ್ ಕೇಂದ್ರವಾಗಿ ಮತ್ತು ಜಾಗತಿಕವಾಗಿ 5ನೇ ಅತಿದೊಡ್ಡ ಯುನಿಕಾರ್ನ್ ಕೇಂದ್ರವಾಗಿ ಹೊರಹೊಮ್ಮಿದೆ ಎಂದು ಅವರು ಹೇಳಿದ್ದಾರೆ.
‘ಡೀಪ್ ಟೆಕ್’ನಿಂದ ದೈನಂದಿನ ತಂತ್ರಜ್ಞಾನದವರೆಗೆ, ಬೆಂಗಳೂರಿನ ಸ್ಟಾರ್ಟ್‌ಅಪ್‌ಗಳು ಪ್ರತಿಯೊಂದು ಪ್ರಮುಖ ವಲಯದಲ್ಲೂ ಪ್ರಾಬಲ್ಯ ಸಾಧಿಸಿವೆ. ಬೆಂಗಳೂರು ನಗರ ಭಾರತದ ತಂತ್ರಜ್ಞಾನ ಆರ್ಥಿಕತೆಯ ಕೇಂದ್ರವಾಗಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದ್ದಾರೆ.



