April 29, 2026
Wednesday, April 29, 2026
spot_img

ತಂಗಿಯ ಹಣಕ್ಕಾಗಿ ಶವವನ್ನೇ ಬ್ಯಾಂಕ್ ಮುಂದೆ ತಂದ ಅಣ್ಣ: ಶಾಕ್ ನಲ್ಲಿ ಅಧಿಕಾರಿಗಳು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಾನವ ಸಮಾಜವೇ ತಲೆತಗ್ಗಿಸುವಂತಹ ಘಟನೆಯೊಂದು ಒಡಿಶಾದ ಕಿಯೋಂಝಾರ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಮೃತಪಟ್ಟ ತಂಗಿಯ ಬ್ಯಾಂಕ್ ಖಾತೆಯಲ್ಲಿದ್ದ ಹಣ ಪಡೆಯಲು ಅಗತ್ಯ ದಾಖಲೆಗಳಿಲ್ಲದೆ ಸಂಕಷ್ಟಕ್ಕೀಡಾದ ಅಣ್ಣ, ಕೊನೆಗೆ ಶವದ ಅವಶೇಷಗಳನ್ನೇ ಬ್ಯಾಂಕ್ ಮುಂದೆ ತಂದು ಇಟ್ಟ ಘಟನೆ ಅಚ್ಚರಿ ಮೂಡಿಸಿದೆ.

ಜೀತು ಮುಂಡಾ ಎಂಬ ವ್ಯಕ್ತಿ, ಎರಡು ತಿಂಗಳ ಹಿಂದೆ ನಿಧನರಾದ ತನ್ನ ತಂಗಿಯ ಖಾತೆಯಲ್ಲಿದ್ದ ಹಣವನ್ನು ಪಡೆಯಲು ಹಲವು ಬಾರಿ ಬ್ಯಾಂಕ್‌ಗೆ ತೆರಳಿದ್ದಾನೆ. ಆದರೆ ಮರಣ ಪ್ರಮಾಣಪತ್ರ ಅಥವಾ ವಾರಸುದಾರರ ದಾಖಲೆ ಇಲ್ಲದೆ ಹಣ ಬಿಡುಗಡೆ ಸಾಧ್ಯವಿಲ್ಲ ಎಂದು ಬ್ಯಾಂಕ್ ಸಿಬ್ಬಂದಿ ತಿಳಿಸಿದ್ದರು. ಇದರಿಂದ ನಿರಾಶೆಗೊಂಡ ಆತ, ತಂಗಿ ಮೃತಪಟ್ಟಿರುವುದನ್ನು ಸಾಬೀತುಪಡಿಸುವ ಉದ್ದೇಶದಿಂದ ಸ್ಮಶಾನಕ್ಕೆ ತೆರಳಿ ಶವದ ಅವಶೇಷಗಳನ್ನು ಹೊರತೆಗೆದು ಬ್ಯಾಂಕ್ ಎದುರು ತಂದಿದ್ದಾನೆ ಎನ್ನಲಾಗಿದೆ.

ಇದನ್ನೂ ಓದಿ:

ಘಟನೆ ತಿಳಿಯುತ್ತಿದ್ದಂತೆ ಪೊಲೀಸರು ಮತ್ತು ಸ್ಥಳೀಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿ ನಿಯಂತ್ರಿಸಿದರು. ಬಳಿಕ ಅಗತ್ಯ ದಾಖಲೆಗಳ ವ್ಯವಸ್ಥೆಗೆ ಸಹಕರಿಸುವ ಭರವಸೆ ನೀಡಿದ ನಂತರ ಜೀತು ಮುಂಡಾ ಶಾಂತಗೊಂಡಿದ್ದಾರೆ.

ಈ ಘಟನೆಗೆ ಬ್ಯಾಂಕ್ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದು, ಮೃತರ ಹಾಜರಾತಿ ಕೇಳಿರಲಿಲ್ಲ; ಕೇವಲ ಕಾನೂನು ಪ್ರಕ್ರಿಯೆಗೆ ಬೇಕಾದ ದಾಖಲೆಗಳನ್ನು ಮಾತ್ರ ಕೇಳಿದ್ದೇವೆ. ಅವರು ಕುಡಿದ ಅಮಲಿನಲ್ಲಿ ಬಂದು ಗಲಾಟೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !