ಹೊಸದಿಗಂತ ವರದಿ, ಚಿತ್ರದುರ್ಗ :
ಒಳಮೀಸಲಾತಿ ಜಾರಿ ಕುರಿತಂತೆ ಸರ್ಕಾರಿ ಆದೇಶ ಹೊರಬೀಳುವುದರೊಂದಿಗೆ ವರ್ಗೀಕರಣದ ಹೋರಾಟಕ್ಕೆ ಒಂದು ಹಂತದ ಜಯ ಸಿಕ್ಕಂತಾಗಿದೆ. ಒಳಮೀಸಲಾತಿಯ ವಿಷಯದಲ್ಲಿ ಹಲವರು ಸಾಕಷ್ಟು ಒತ್ತಡ ತಂದರೂ ಸರ್ಕಾರ ಸೊಪ್ಪು ಹಾಕದೆ ಜಾರಿ ಮಾಡಿರುವುದು ಸ್ವಾಗತಾರ್ಹ ಎಂದು ಶಿವಶರಣ ಮಾದಾರ ಚೆನ್ನಯ್ಯ ಗುರುಪೀಠ ಡಾ.ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಒಟ್ಟು ಒಳಮೀಸಲಾತಿಯ ಜಾರಿಯಲ್ಲಿ ಇನ್ನೂ ಸಾಕಷ್ಟು ಮಾರ್ಪಾಡುಗಳ ಆಗತ್ಯವಿದೆ. ಆದರೂ ಸರ್ಕಾರ ದೃಡ ಹೆಜ್ಜೆಇಟ್ಟು ೫.೨೫ : ೫.೨೫ : ೪.೫೦ ಸೂತ್ರ ರೂಪಿಸಿದೆ. ಒಳಮೀಸಲಾತಿ ಸುಪ್ರೀಂಕೋರ್ಟ್ ನಿರ್ದೇಶನದ ಅನ್ವಯವೇ ರೋಸ್ಟರ್ ಸೇರಿದಂತೆ ಎಲ್ಲ ಹಂತಗಳಲ್ಲಿ ಜಾರಿಯಾಗಬೇಕೆಂಬುದು ಶ್ರೀಮಠದ ಆಶಯವಾಗಿದೆ. ಈ ಬಗ್ಗೆ ಮತ್ತೊಂದು ಹಂತ ಚರ್ಚೆಗಳು ನೆಡೆದು ಸೂಕ್ತ ಮಾರ್ಪಾಡುಗಳನ್ನು ಅಳವಡಿಸಿಕೊಳ್ಳುವ ಬಗ್ಗೆ ಸರ್ಕಾರ ನಿಗಾ ವಹಿಸಬೇಕು ಎಂದು ಸಲಹೆ ಮಾಡಿದ್ದಾರೆ.
ಸುಪ್ರೀಂಕೋರ್ಟ್ ತೀರ್ಪು ಬಂದು ಸುಮಾರು ೨೦ ತಿಂಗಳುಗಳ ತರುವಾಯ ಸ್ವತಃ ಮುಖ್ಯಮಂತ್ರಿಗಳೇ ಮುತುವರ್ಜಿ ವಹಿಸಿ ಒಳಮೀಸಲಾತಿ ಜಾರಿ ಮಾಡಿ ಅಭಿನಂದನೆಗೆ ಪಾತ್ರರಾಗಿದ್ದಾರೆ. ಸಮುದಾಯದ ಹಿರಿಯರೂ, ಸಚಿವರೂ ಆದ ಕೆ.ಹೆಚ್.ಮುನಿಯಪ್ಪ ಮತ್ತು ಆರ್.ಬಿ.ತಿಮ್ಮಾಪುರ ಅವರು ಜಟಿಲ ಸನ್ನಿವೇಶಗಳಲ್ಲಿ ಸೂಕ್ತ ಮಾರ್ಗದರ್ಶನ ನೀಡಿ ತಮ್ಮದೇ ಆದ ರೀತಿಯಲ್ಲಿ ಮಹತ್ವದ ಪಾತ್ರವಹಿಸಿ ಅಭಿನಂದನೆಗೆ ಪಾತ್ರರಾಗಿದ್ದಾರೆ. ಮೂವತ್ತು ವರ್ಷಗಳ ಸುಧೀರ್ಘ ಹೋರಾಟದಲ್ಲಿ ಪಾಲ್ಗೊಂಡ ಎಲ್ಲ ಸಮಾಜ ಬಂಧುಗಳ ಕೊಡುಗೆಯನ್ನು ಶ್ರೀ ಮಠ ಈ ಸಂದರ್ಭದಲ್ಲಿ ಸ್ಮರಿಸುತ್ತದೆ ಎಂದು ಡಾ.ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ತಿಳಿಸಿದ್ದಾರೆ.



