April 30, 2026
Thursday, April 30, 2026
spot_img

ಒಂದೇ ಒಂದು ಮಳೆಗೆ ನಲುಗಿಹೋದ ಬೆಂಗಳೂರು, ಒಟ್ಟಾರೆ ಹತ್ತು ಮಂದಿ ಬ*ಲಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬಿಸಿಲಿನಿಂದ ಬೆಂದು ಹೋಗಿದ್ದ ಬೆಂಗಳೂರು ಮಳೆಯಿಂದಾಗಿ ತಂಪಾಗಿದ್ದೇನೋ ನಿಜ, ಆದರೆ ಮಳೆಯ ಉಗ್ರರೂಪಕ್ಕೆ ಬೆಂಗಳೂರಿನಲ್ಲಿ ಹತ್ತು ಮಂದಿಯ ಪ್ರಾಣ ಹೋಗಿದೆ.

ಹೌದು, ಬೆಂಗಳೂರಿನ ಶಿವಾಜಿನಗರದ ಬೌರಿಂಗ್‌ ಆಸ್ಪತ್ರೆ ಶವಾಗಾರದ ಬಳಿ ಕಾಂಪೌಂಡ್‌ ಕುಸಿದು ಬಿದ್ದಿದ್ದು ಏಳು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇದರಲ್ಲಿ ಇಬ್ಬರು ಮಕ್ಕಳು ಕೂಡ ಇದ್ದಾರೆ.

ಇನ್ನು ದುರಂತದ ಘಟನೆಯಿಂದ ನೂರು ಮೀಟರ್‌ ದೂರದಲ್ಲಿ ಗಾಡಿ ಪಾರ್ಕ್‌ ಮಾಡುತ್ತಿದ್ದ ಸೈಯದ್‌ ಸೂಫಿಯಾನ್‌ ಎಂಬ ಯುವಕ ಕೂಡ ಮೃತಪಟ್ಟಿದ್ದಾರೆ. ಕಾಂಪೌಂಡ್‌ ಕುಸಿತದ ವೇಳೆ ಬೆಸ್ಕಾಂ ವಿದ್ಯುತ್‌ ವೈಯರ್‌ ಕತ್ತರಿಸಿಹೋಗಿದೆ. ಈ ವೈಯರ್‌ ಪಾರ್ಕಿಂಗ್‌ ಮಾಡುತ್ತಿದ್ದ ಸೈಯದ್‌ಗೆ ತಾಕಿದ್ದು, ಸ್ಥಳದಲ್ಲಿಯೇ ಪ್ರಾಣಬಿಟ್ಟಿದ್ದಾರೆ.

ಕೆಜಿ ಹಳ್ಳಿಯ ನಿವಾಸಿ ಸೈಯದ್‌ಗೆ ಬರೀ 17 ವರ್ಷ. ಈತ ತನ್ನ ತಾಯಿ ಜೊತೆ ಬಟ್ಟೆ ಖರೀದಿ ಮಾಡೋಕೆ ಬಂದಿದ್ದ ಎಂದು ತಿಳಿದುಬಂದಿದೆ. ಪಾರ್ಕ್‌ ಮಾಡೋಕೆ ಸೈಯದ್‌ ರಸ್ತೆ ಬಳಿ ನಿಂತಿದ್ದರೆ, ಮಳೆಯ ಕಾರಣ ಅವರ ತಾಯಿ ಅಲ್ಲಿದ್ದ ಅಂಗಡಿಯ ಬಳಿ ಆಸರೆ ಪಡೆದಿದ್ದರು. ತಾಯಿ ಎದುರಿಗೇ ಸೈಯದ್‌ ಪ್ರಾಣಬಿಟ್ಟಿದ್ದಾರೆ. ಮಗನನ್ನು ಕಳೆದುಕೊಂಡ ಶಾಕ್‌ನಲ್ಲಿ ತಾಯಿ ಕೂಡ ಕುಸಿದುಬಿದ್ದಿದ್ದು, ಐಸಿಯುನಲ್ಲಿ ದಾಖಲಿಸಲಾಗಿದೆ.

ಇನ್ನು ಮೈಸೂರು ರಸ್ತೆಯಲ್ಲಿ ಗೋಡೌನ್‌ನ ಶೀಟ್‌ಗಳು ತಲೆ ಮೇಲೆ ಬಿದ್ದು, ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಅವರ ಗುರುತು ಇನ್ನೂ ಪತ್ತೆಯಾಗಿಲ್ಲ.

ಕಸ್ತೂರಿಬಾಯಿ ನಗರದ ಅಶ್ವತ್ಥ್‌ ಕಟ್ಟೆ ರಸ್ತೆಯಲ್ಲಿದ್ದ ಮನೆಯೊಂದರ ಮೇಲೆ ಸಿಮೆಂಟ್‌ ಸೀಟ್‌ ಕುಸಿದುಬಿದ್ದಿದೆ. ಮನೆಯಲ್ಲಿದ್ದ ಮಂಜು ಎಂಬಾತ ಸ್ಥಳದಲ್ಲಿಯೇ ಪ್ರಾಣಬಿಟ್ಟಿದ್ದಾರೆ.

ಅರ್ಧ ಗಂಟೆಯ ಮಳೆ ಇಡೀ ಬೆಂಗಳೂರನ್ನೇ ಅಲುಗಾಡಿಸಿದ್ದು, ಜನ ಬಿಸಿಲೇ ಪರವಾಗಿಲ್ಲ ಎನ್ನುತ್ತಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !