June 2, 2026
Tuesday, June 2, 2026
spot_img

ಬೌರಿಂಗ್ ಆಸ್ಪತ್ರೆ ದುರಂತಕ್ಕೆ ಪ್ರಧಾನಿ ಮೋದಿ ಸಂತಾಪ: ಮೃತರ ಕುಟುಂಬಕ್ಕೆ ನೆರವು ಘೋಷಿಸಿದ ಕೇಂದ್ರ ಸರ್ಕಾರ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಅಬ್ಬರಿಸಿದ ಭಾರಿ ಮಳೆ ಭೀಕರ ದುರಂತಕ್ಕೆ ಕಾರಣವಾಗಿದೆ. ಶಿವಾಜಿನಗರದ ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಯ ಆವರಣದ ಗೋಡೆ ಕುಸಿದು 7 ಮಂದಿ ದಾರುಣವಾಗಿ ಮೃತಪಟ್ಟಿದ್ದಾರೆ. ಬುಧವಾರ ಸಂಜೆ ಸುರಿದ ಧಾರಾಕಾರ ಮಳೆಯಿಂದಾಗಿ ಈ ಅನಾಹುತ ಸಂಭವಿಸಿದ್ದು, ಮೃತರ ಕುಟುಂಬಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ತೀವ್ರ ಸಂತಾಪ ಸೂಚಿಸಿದ್ದಾರೆ.

ಈ ಘಟನೆಯ ಕುರಿತು ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಕಳವಳ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು, “ಕರ್ನಾಟಕದ ಬೆಂಗಳೂರಿನಲ್ಲಿ ಗೋಡೆ ಕುಸಿದು ಸಂಭವಿಸಿದ ದುರ್ಘಟನೆ ಅತ್ಯಂತ ದುರದೃಷ್ಟಕರ. ನನ್ನ ಸಂವೇದನೆಗಳು ಮೃತರ ಕುಟುಂಬದೊಂದಿಗೆ ಇವೆ. ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ನಾನು ಪ್ರಾರ್ಥಿಸುತ್ತೇನೆ” ಎಂದು ಪೋಸ್ಟ್ ಮಾಡಿದ್ದಾರೆ.

ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಕೇಂದ್ರ ಸರ್ಕಾರ ಆರ್ಥಿಕ ನೆರವು ಘೋಷಿಸಿದೆ. ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಯಿಂದ ಮೃತರ ಕುಟುಂಬಸ್ಥರಿಗೆ ತಲಾ 2 ಲಕ್ಷ ರೂಪಾಯಿ ಹಾಗೂ ಗಾಯಾಳುಗಳಿಗೆ ತಲಾ 50,000 ರೂಪಾಯಿ ಪರಿಹಾರ ನೀಡಲಾಗುವುದು ಎಂದು ಪ್ರಧಾನಿ ಕಾರ್ಯಾಲಯ ತಿಳಿಸಿದೆ.

ಶಿವಾಜಿನಗರದ ಜನನಿಬಿಡ ಪ್ರದೇಶದಲ್ಲಿ ಸಂಜೆ ವೇಳೆ ಮಳೆಯಿಂದ ರಕ್ಷಿಸಿಕೊಳ್ಳಲು ಜನರು ಗೋಡೆಯ ಪಕ್ಕದಲ್ಲಿ ಆಶ್ರಯ ಪಡೆದಿದ್ದರು. ಈ ವೇಳೆ ಹಳೆಯದಾದ ಬೌರಿಂಗ್ ಆಸ್ಪತ್ರೆಯ ಗೋಡೆ ಕುಸಿದಿದ್ದರಿಂದ ಈ ಜೀವಹಾನಿ ಸಂಭವಿಸಿದೆ. ಘಟನಾ ಸ್ಥಳಕ್ಕೆ ರಾಜ್ಯ ಸರ್ಕಾರದ ಸಚಿವರು ಮತ್ತು ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಮೃತರ ಕುಟುಂಬಕ್ಕೆ ರಾಜ್ಯ ಸರ್ಕಾರ ಕೂಡ ಪ್ರತ್ಯೇಕವಾಗಿ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !