ಹೊಸದಿಗಂತ ಡಿಜಿಟಲ್ ಡೆಸ್ಕ್:
ಕ್ಷುಲ್ಲಕ ಕಾರಣದಿಂದಾಗಿ ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಕೊಡಲಿಯಿಂದ ಕೊಚ್ಚಿರುವ ಘಟನೆ ಮೈಸೂರಿನ ಹಳೆ ಕೆಸರೆ ಗ್ರಾಮದಲ್ಲಿ ನಡೆದಿದೆ.
24 ವರ್ಷದ ಪುಷ್ಪ ಮೃತರು. ಆರೋಪಿ ಮಹೇಶ್ ತನ್ನ ಪತ್ನಿ ಕೆಲಸ ಮುಗಿಸಿ ನಿತ್ಯವೂ ಲೇಟಾಗಿ ಮನೆಗೆ ಬರುತ್ತಾಳೆ ಎನ್ನುವ ಕಾರಣಕ್ಕೆ ಕೊಲೆ ಮಾಡಿ, ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ.
ಮೃತ ಪುಷ್ಪ ಮೈಸೂರಿನ ದೇವರಾಜ ಅರಸು ರಸ್ತೆಯಲ್ಲಿರುವ ಖಾಸಗಿ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಕೆಲಸ ಮುಗಿಸಿ ಮನೆಗೆ ಬರುವ ಹೊತ್ತಿಗೆ ಲೇಟಾಗಿರುತ್ತಿತ್ತು. ಇದೇ ವಿಷಯಕ್ಕೆ ಮನೆಯಲ್ಲಿ ನಿತ್ಯವೂ ಜಗಳ ನಡೆಯುತ್ತಲೇ ಇತ್ತು.
ಕೆಲಸ ಮುಗಿಸಿ ಮನೆಗೆ ಬರಲು ಒಂದು ಗಂಟೆ ಸಾಕು ಆದರೆ ಪತ್ನಿ ಇನ್ನೂ ತಡವಾಗಿ ಬರುತ್ತಾಳೆ ಎಂದರೆ ಆಕೆಗೆ ಬೇರೆ ಏನಾದರೂ ಸಂಬಂಧ ಇರಬಹುದಾ ಎಂದು ಅನುಮಾನ ಪಡುತ್ತಿದ್ದ. ಎಂದಿನಂತೆ ಲೇಟಾಗಿ ಬಂದ ಪುಷ್ಪಾ ಮೇಲೆ ಮಹೇಶ್ ಕೂಗಾಡಿದ್ದ. ನಿಂತಿದ್ದ ಪುಷ್ಪಾಗೆ ಹಿಂಬದಿಯಿಂದ ಕೊಡಲಿ ಏಟು ಕೊಟ್ಟಿದ್ದ. ತಲೆ ಹಿಡಿದುಕೊಂಡು ಪುಷ್ಪಾ ನೆಲಕ್ಕೆ ಬಿದ್ದಿದ್ದರು. ಈ ವೇಳೆ ದಿಂಬಿನಿಂದ ಆಕೆಯ ಉಸಿರುಗಟ್ಟಿಸಿ ಕೊಂದಿದ್ದಾನೆ. ನಂತರ ತಾನೇ ಠಾಣೆಗೆ ಹೋಗಿ ಪತ್ನಿಯನ್ನು ಕೊಂದಿದ್ದೇನೆ ಏನು ಶಿಕ್ಷೆ ಇದೆಯೋ ಕೊಡಿ ಎಂದು ಹೇಳಿದ್ದಾರೆ.
ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.



