ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜಸ್ಥಾನದ ಜೋಧ್‌ಪುರ ಜಿಲ್ಲೆಯ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ಮತ್ತು ತಂತ್ರಜ್ಞಾದ ಅದ್ಭುತ ಸಮ್ಮಿಲನ ನಡೆಯುತ್ತಿದೆ.ಇಲ್ಲಿನ ಸರ್ಕಾರಿ ಶಾಲೆಗಳಲ್ಲಿ ಪ್ರಯೋಗಿಕವಾಗಿ ಜಾರಿಗೆ ತರಲಾದ ಹೊಸ AI ಆಧಾರಿತ ಯೋಜನೆಯು ಸಾಂಪ್ರದಾಯಿಕ ಪರೀಕ್ಷಾ ಪದ್ಧತಿಯನ್ನೆ ಬದಲಾಯಿಸಿದೆ.
ಕೈಯಿಂದ ಅಂಕಗಳನ್ನು ನೀಡುವ ಬದಲು ಸೆಕೆಂಡ್‌ಗಳಲ್ಲಿ ಉತ್ತರ ಪತ್ರಿಕೆಗಳನ್ನು ಪರಿಶೀಲಿಸುವ ಸ್ವಯಂಚಾಲಿತ ವ್ಯವಸ್ಥೆಯು ಶಿಕ್ಷಕರ ಹೊರೆಯನ್ನು ಕಡಿಮೆ ಮಾಡಿದೆ. ಅಧಿಕಾರಿಗಳ ವರದಿಯ ಪ್ರಕಾರ, 1,000 ಸರ್ಕಾರಿ ಶಾಲೆಗಳ 6 ರಿಂದ 9 ನೇ ತರಗತಿಯ 70,000 ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಮೌಲ್ಯಮಾಪನ ಮಾಡಲಾಗಿದ್ದು, ಒಟ್ಟು 3,00,000 ಕ್ಕೂ ಹೆಚ್ಚು ಮೌಲ್ಯಮಾಪನಗಳನ್ನು ಮಾಡಲಾಗಿದೆ. ಹಿಂದಿ ಮತ್ತು ಇಂಗ್ಲಿಷ್ ಮಾಧ್ಯಮದ ಶಾಲೆಗಳಲ್ಲಿ ನಡೆದ ಈ ಯೋಜನೆಯು ಹಿಂದಿ, ಇಂಗ್ಲಿಷ್, ಗಣಿತ, ವಿಜ್ಞಾನ ಮತ್ತು ಸಮಾಜ ವಿಜ್ಞಾನ ಎಂಬ ಐದು ಪ್ರಮುಖ ವಿಷಯಗಳನ್ನು ಒಳಗೊಂಡಿದೆ.
ಇದನ್ನೂ ಓದಿ:
ವಿಶೇಷವಾದ AI ಆ್ಯಪ್ ಬಳಸಿಕೊಂಡು ಶಿಕ್ಷಕರು ಈಗ ಕೈಬರಹದ ಉತ್ತರ ಪತ್ರಿಕೆಗಳನ್ನು ಸ್ಕ್ಯಾನ್ ಮಾಡಬಹುದು ಮತ್ತು ಕಲವೇ ಸೆಕೆಂಡುಗಳಲ್ಲಿ ವಿವರವಾದ ಫಲಿತಾಂಶವನ್ನು ಪಡೆಯಬಹುದು. ಈ ತಂತ್ರಜ್ಞಾನವು ಈ ಮೊದಲು ವಾರಗಟ್ಟಲೆ ತೆಗೆದುಕೊಳ್ಳುತ್ತಿದ್ದ ಮೌಲ್ಯಮಾಪನ ಪ್ರಕ್ರಿಯೆಯನ್ನು ಕೇವಲ ಮೂರೇ ದಿನಗಳಿಗೆ ಇಳಿಸಿದೆ. ಇದು ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರಿಗೆ ತಕ್ಷಣದ ವರದಿಗಳನ್ನು ಒದಗಿಸುತ್ತಿದೆ.
ಈ ಹೊಸ ವ್ಯವಸ್ಥೆಯ ಪ್ರಮುಖ ವೈಶಿಷ್ಟ್ಯವೆಂದರೆ ಸಾಮಾನ್ಯ ಗ್ರೇಡ್‌ಗಳ ಬದಲಿಗೆ ಸಾಮರ್ಥ್ಯ ಆಧಾರಿತ ವಿಶ್ಲೇಷಣೆ ನೀಡುವುದು. ಕೇವಲ ಒಟ್ಟು ಅಂಕಗಳನ್ನು ನೀಡುವ ಬದಲು, ಈ ಪ್ರಗತಿ ಪತ್ರಗಳು ವಿದ್ಯಾರ್ಥಿಯ ನಿರ್ದಿಷ್ಟ ಸಾಮರ್ಥ್ಯ ಮತ್ತು ದೌರ್ಬಲ್ಯಗಳನ್ನು ಎತ್ತಿ ತೋರಿಸುತ್ತವೆ. ಈ ನಿಖರವಾದ ಪ್ರತಿಕ್ರಿಯೆಯು ಪೋಷಕರು ಮತ್ತು ಶಿಕ್ಷಕರಿಗೆ ವಿದ್ಯಾರ್ಥಿಯ ವೈಯಕ್ತಿಕ ಸುಧಾರಣೆಗಾಗಿ ಸ್ಪಷ್ಟವಾದ ಮಾರ್ಗಸೂಚಿಯನ್ನು ನೀಡುತ್ತದೆ.



