ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಶ್ಚಿಮ ಬಂಗಾಳದ ಮರು ಮತದಾನ ಪ್ರಕ್ರಿಯೆ ಶಾಂತಿಯುತವಾಗಿ ಆರಂಭವಾದರೂ, ಕೆಲವೇ ಗಂಟೆಗಳಲ್ಲಿ ರಾಜಕೀಯ ಉದ್ವಿಗ್ನತೆ ತಾರಕಕ್ಕೇರಿದ ಘಟನೆ ನಡೆದಿದೆ.
ಡೈಮಂಡ್ ಹಾರ್ಬರ್ ಹಾಗೂ ಮಗ್ರಹತ್ ಪಶ್ಚಿಮ್ ಕ್ಷೇತ್ರಗಳ ಕೆಲವು ಮತಗಟ್ಟೆಗಳಲ್ಲಿ ಟಿಎಂಸಿ ಮತ್ತು ಬಿಜೆಪಿ ಬೆಂಬಲಿಗರ ನಡುವೆ ಜಟಾಪಟಿ ಉಂಟಾಗಿ ಪರಿಸ್ಥಿತಿ ಉದ್ವಿಗ್ನಗೊಂಡಿತು.
ಭಾರಿ ಭದ್ರತಾ ವ್ಯವಸ್ಥೆಯ ನಡುವೆ ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಗಿತ್ತು. ಆದರೆ ನಂತರ ಮತದಾರರಿಗೆ ಅಡ್ಡಿಪಡಿಸಲಾಗುತ್ತಿದೆ ಎಂಬ ಆರೋಪದ ವಿಚಾರವಾಗಿ ಎರಡು ಪಕ್ಷಗಳ ಕಾರ್ಯಕರ್ತರ ನಡುವೆ ವಾಗ್ವಾದ ಶುರುವಾಗಿ ಘರ್ಷಣೆಗೆ ತಿರುಗಿತು. ಘಟನೆಯಲ್ಲಿ ಎರಡೂ ಪಕ್ಷಗಳ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:
ಮತದಾನಕ್ಕೆ ನಿರ್ಬಂಧ ಹಾಕಲಾಗುತ್ತಿದೆ ಎಂದು ಬಿಜೆಪಿ ಆರೋಪಿಸಿದ್ದು, ಟಿಎಂಸಿ ಈ ಆರೋಪವನ್ನು ತಳ್ಳಿ ಹಾಕಿದೆ. ಪರಿಸ್ಥಿತಿ ಕೈಮೀರದಂತೆ ಕೇಂದ್ರ ಮೀಸಲು ಪಡೆ ಸಿಬ್ಬಂದಿ ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು.
ಇದರ ನಡುವೆ ಮತದಾನ ಪ್ರಕ್ರಿಯೆ ಮುಂದುವರಿದಿದ್ದು, ಮಧ್ಯಾಹ್ನದ ವೇಳೆಗೆ ಎರಡೂ ಕ್ಷೇತ್ರಗಳಲ್ಲಿ ಶೇ.50ಕ್ಕಿಂತ ಹೆಚ್ಚು ಮತದಾನ ದಾಖಲಾಗಿದೆ ಎಂದು ಚುನಾವಣಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.



