May 3, 2026
Sunday, May 3, 2026
spot_img

ಹೊಂಡದಲ್ಲಿ ಈಜಲು ಹೋದ ಇಬ್ಬರು ಬಾಲಕರ ದುರಂತ ಅಂತ್ಯ

ಹೊಸದಿಗಂತ ವರದಿ ಬೆಳಗಾವಿ:

ಇಲ್ಲಿನ ಪ್ರಸಿದ್ಧ ಕಪಿಲೇಶ್ವರ ದೇವಸ್ಥಾನದ ಹಿಂಭಾಗದಲ್ಲಿರುವ ಹೊಂಡದಲ್ಲಿ ಈಜಲು ಹೋದ ಇಬ್ಬರು ಅಪ್ರಾಪ್ತ ಬಾಲಕರು ನೀರಿನ ಆಳ ತಿಳಿಯದೆ ಮುಳುಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.

ಬೇಸಿಗೆಯ ಬಿಸಿಲಿನ ಬೇಗೆಯಿಂದ ಪಾರಾಗಲು ಈ ಬಾಲಕರು ಗುಂಪಾಗಿ ಈಜಲು ಬಂದಿದ್ದರು ಎನ್ನಲಾಗಿದೆ. ಹೊಂಡಕ್ಕೆ ಇಳಿದ ಬಾಲಕರು ಆಳದ ಅಂದಾಜಿಲ್ಲದೆ ನೀರಿನಲ್ಲಿ ಸಿಲುಕಿಕೊಂಡಿದ್ದಾರೆ. ಸ್ಥಳೀಯರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬಾಲಕರನ್ನು ಹೊರತೆಗೆದರಾದರೂ, ಅಷ್ಟರಲ್ಲಾಗಲೇ ಅವರು ಮೃತಪಟ್ಟಿದ್ದರು. ಮೃತ ಯುವಕರು ಶಿವಾಜಿ ನಗರ ಪ್ರದೇಶದ ನಿವಾಸಿಗಳು ಎಂದು ತಿಳಿದುಬಂದಿದೆ.

ಇದನ್ನೂ ಓದಿ:

ಈ ಕಪಿಲೇಶ್ವರ ಹೊಂಡವು ದಶಕಗಳಿಂದ ಸರಿಯಾದ ನಿರ್ವಹಣೆಯಿಲ್ಲದೆ ನಿರ್ಲಕ್ಷ್ಯಕ್ಕೆ ಒಳಗಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಹೊಂಡದ ಸುತ್ತಲೂ ಯಾವುದೇ ಸುರಕ್ಷತಾ ಬೇಲಿ ಅಥವಾ ಎಚ್ಚರಿಕೆ ಫಲಕಗಳಿಲ್ಲದಿರುವುದು ಇಂತಹ ದುರಂತಗಳಿಗೆ ಕಾರಣವಾಗುತ್ತಿದೆ ಎಂದು ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಹಿಂದೆ ಕೂಡ ಇದೇ ಹೊಂಡದಲ್ಲಿ ಜೋಡಿ ಶವಗಳು ಪತ್ತೆಯಾಗಿದ್ದವು. ಘಟನಾ ಸ್ಥಳಕ್ಕೆ ಖಡೇಬಜಾರ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !