ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೆನಾಡದ ಕ್ಯಾಲ್ಗರಿಯಲ್ಲಿ ಪಂಜಾಬಿ ಗಾಯಕ ಮತ್ತು ನಟ ದಿಲ್ಜಿತ್ ದೋಸಾಂಜ್ ಅವರ ಲೈವ್ ಕಾನ್ಸರ್ಟ್ ವೇಳೆ ಖಲಿಸ್ತಾನಿಗಳು ಧ್ವಜಗಳನ್ನು ಪ್ರದರ್ಶಿಸುವ ಮೂಲಕ ಪ್ರತಿಭಟನೆ ನಡೆಸಿದ್ದಾರೆ.
ಈ ವೇಳೆ ದಿಲ್ಜಿತ್ ಹಾಡುವುದನ್ನು ನಿಲ್ಲಿಸಿ, ಸಂದೇಶಯೊಂದನ್ನು ನೀಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆಗುತ್ತಿದೆ.
ಖಲಿಸ್ತಾನಿ ಪರ ಪ್ರತಿಭಟನಾಕಾರರು ದೋಸಂಜ್ ದ್ವಜಗಳನ್ನು ತೋರಿಸುತ್ತಾ ಕಾರ್ಯಕ್ರಮಕ್ಕೆ ಅಡ್ಡಿಪಡಿಸಲು ಯತ್ನಿಸಿದರು. ಈ ವೇಳೆ ದಿಲ್ಜಿತ್ ಹಾಡೋದನ್ನು ಅರ್ಧಕ್ಕೆ ನಿಲ್ಲಿಸಿ, ಎಷ್ಟು ಬೇಕಾದರೂ ನೀವು ಧ್ವಜಗಳನ್ನು ಪ್ರದರ್ಶಿಸಿ, ನಾನು ಅದಕ್ಕೆ ಏನು ಹೇಳಲು ಬಯಸುವುದಿಲ್ಲ. ಆದರೆ ಜಿಮ್ಮಿ ಫಾಲನ್ ಅಂತಹ ದೊಡ್ಡ ವೇದಿಕೆಯಿಂದ ಹಿಡಿದು ನಾನು ಎಲ್ಲಿ ಹೋದರು ನನ್ನ ವೈಯಕ್ತಿಕ ಪ್ರಚಾರಕ್ಕಿಂತ ಪಂಜಾಬ್‌ನ ಹಿರಿಮೆಯನ್ನು ಜಗತ್ತಿಗೆ ಸಾರುತ್ತೇನೆ ಎಂದು ಹೇಳಿದರು.
ನಾನು ಕಾರ್ಯಕ್ರಮ ನೀಡಲು ಅನೇಕ ಅಂತಾರಾಷ್ಟ್ರೀಯ ವೇದಿಕೆಗಳಿಗೆ ತೆರಳಿದಾಗವೂ ಪಂಜಾಬ್ ಕುರಿತು ಮಾತನಾಡುವೆ , ಅಲ್ಲಿ ನನ್ನ ಹಾಡುಗಳ ಪ್ರಚಾರ ಮಾಡಲಿಲ್ಲ. ಪಂಜಾಬ್ ಪ್ರವಾಹ ಪೀಡಿತವಾಗಿದ್ದಾಗ ನಾನು ಮತ್ತು ನನ್ನ ತಂಡ ಪರಿಹಾರ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದೆವು ಎಂದು ತಿಳಿಸಿದರು.
ಈ ವೇಳೆ 1914ರ ‘ಕೊಮಗಾಟ ಮಾರು’ ಘಟನೆಯನ್ನು ನೆನಪಿಸಿಕೊಂಡ ಗಾಯಕ, ಆ ಒಂದು ಕಾಲದಲ್ಲಿ ಭಾರತೀಯ ಕೆನಡಾ ಪ್ರವೇಶಕ್ಕೆ ಅವಕಾಶವೇ ಇರಲಿಲ್ಲ. ಆದರೆ ಇಂದು 50,000ಕ್ಕೂ ಹೆಚ್ಚು ಜನರು ಭಾರತೀಯ ಸಂಗೀತವನ್ನು ಆಚರಿಸಲು ಸೇರಿದ್ದಾರೆ. ಇದು ಪಂಜಾಬ್ ಬೆಳೆದು ಬಂದ ಹಾದಿ ಎಂದು ತಿಳಿಸಿದರು.



