ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದ ರಾಜಕೀಯ ಭವಿಷ್ಯವನ್ನು ನಿರ್ಧರಿಸಲಿರುವ ಐದು ರಾಜ್ಯಗಳ ವಿಧಾನಸಭಾ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಇಂದು ಆರಂಭವಾಗಿದ್ದು, ಆರಂಭಿಕ ಟ್ರೆಂಡ್ಸ್ ಅತ್ಯಂತ ಕುತೂಹಲಕಾರಿಯಾಗಿವೆ. ಪಶ್ಚಿಮ ಬಂಗಾಳ, ಅಸ್ಸಾಂ, ಕೇರಳ, ತಮಿಳುನಾಡು ಮತ್ತು ಪುದುಚೇರಿಗಳಲ್ಲಿ ಇವಿಎಂ ಯಂತ್ರಗಳನ್ನು ತೆರೆಯಲಾಗುತ್ತಿದ್ದು, ಪ್ರತಿ ನಿಮಿಷಕ್ಕೂ ಚಿತ್ರಣ ಬದಲಾಗುತ್ತಿದೆ.
ಬಂಗಾಳದ ಅಖಾಡದಲ್ಲಿ ಅಧಿಕಾರ ಹಿಡಿಯಲು ತೃಣಮೂಲ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಪೈಪೋಟಿ ಏರ್ಪಟ್ಟಿದೆ. ಸದ್ಯದ ಮಾಹಿತಿ ಪ್ರಕಾರ, TMC 103 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಬಿಜೆಪಿ ಕೂಡ ಅಷ್ಟೇ 103 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಳ್ಳುವ ಮೂಲಕ ಸಮಬಲದ ಹೋರಾಟ ನೀಡುತ್ತಿದೆ.
ಈಶಾನ್ಯ ರಾಜ್ಯ ಅಸ್ಸಾಂನಲ್ಲಿ ಬಿಜೆಪಿ ಅಧಿಕಾರ ಉಳಿಸಿಕೊಳ್ಳುವತ್ತ ದಾಪುಗಾಲು ಹಾಕುತ್ತಿದೆ. ಒಟ್ಟು 126 ಸ್ಥಾನಗಳ ಪೈಕಿ ಬಿಜೆಪಿ 61 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಇದಕ್ಕೆ ವಿರುದ್ಧವಾಗಿ ಕಾಂಗ್ರೆಸ್ ಕೇವಲ 9 ಸ್ಥಾನಗಳಲ್ಲಿ ಮುನ್ನಡೆ ಪಡೆಯುವ ಮೂಲಕ ಭಾರೀ ಹಿನ್ನಡೆ ಅನುಭವಿಸಿದೆ.
ಕೇರಳದಲ್ಲಿ ಈ ಬಾರಿ ಸಣ್ಣ ಬದಲಾವಣೆಯ ಗಾಳಿ ಬೀಸುತ್ತಿದೆ. ಆರಂಭಿಕ ಮತ ಎಣಿಕೆಯಲ್ಲಿ ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟ 71 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿ ಅಧಿಕಾರದ ಗದ್ದುಗೆಯತ್ತ ಸಾಗುತ್ತಿದೆ. ಹಾಲಿ ಆಡಳಿತರೂಢ ಎಡ ಮೈತ್ರಿಕೂಟ 64 ಸ್ಥಾನಗಳಲ್ಲಿ ಪೈಪೋಟಿ ನಡೆಸುತ್ತಿದೆ.
ದಕ್ಷಿಣದ ಪ್ರಮುಖ ರಾಜ್ಯ ತಮಿಳುನಾಡಿನಲ್ಲಿ ಡಿಎಂಕೆ ಸ್ಪಷ್ಟ ಬಹುಮತದತ್ತ ಮುನ್ನುಗ್ಗುತ್ತಿದೆ. ಎಂ.ಕೆ. ಸ್ಟಾಲಿನ್ ನೇತೃತ್ವದ ಡಿಎಂಕೆ 104 ಸ್ಥಾನಗಳಲ್ಲಿ ಮುನ್ನಡೆಯಲ್ಲಿದ್ದರೆ, ಅಧಿಕಾರ ಕಳೆದುಕೊಳ್ಳುವ ಭೀತಿಯಲ್ಲಿರುವ AIADMK ಕೇವಲ 27 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.
ಕೇಂದ್ರಾಡಳಿತ ಪ್ರದೇಶ ಪುದುಚೇರಿಯಲ್ಲಿ ಬಿಜೆಪಿ ನೇತೃತ್ವದ ಮೈತ್ರಿಕೂಟ ಪ್ರಾಬಲ್ಯ ಮೆರೆಯುತ್ತಿದೆ. ಇಲ್ಲಿ ಬಿಜೆಪಿ 22 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದರೆ, ಕಾಂಗ್ರೆಸ್ ಮೈತ್ರಿಕೂಟ ಕೇವಲ 06 ಸ್ಥಾನಗಳಿಗೆ ಸೀಮಿತವಾಗಿದೆ.
ಇದು ಕೇವಲ ಆರಂಭಿಕ ಮುನ್ನಡೆಯಾಗಿದ್ದು, ಮತ ಎಣಿಕೆ ಮುಂದುವರೆದಂತೆ ಅಂತಿಮ ಫಲಿತಾಂಶದ ಚಿತ್ರಣ ಸ್ಪಷ್ಟವಾಗಲಿದೆ.



