May 4, 2026
Monday, May 4, 2026
spot_img

ಬಿಜೆಪಿ ಜಯಭೇರಿ: ಗುಮ್ಮಟ ನಗರಿಯಲ್ಲಿ ಕಾರ್ಯಕರ್ತರ ಭರ್ಜರಿ ವಿಜಯೋತ್ಸವ

ಹೊಸದಿಗಂತ ವರದಿ ವಿಜಯಪುರ:

ಪಶ್ಚಿಮ ಬಂಗಾಳ, ಆಸ್ಸಾಂ, ಪಾಂಡೇಚೇರಿಯಲ್ಲಿ ಬಿಜೆಪಿ ಭರ್ಜರಿ ಗೆಲುವಿನ ನಗೆ ಬೀರಿದ ಹಿನ್ನೆಲೆ ಗುಮ್ಮಟ ನಗರಿಯಲ್ಲಿ ಬಿಜೆಪಿ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.

ಇಲ್ಲಿನ ಗಾಂಧಿವೃತ್ತದ ಎದುರು ಜಮಾಯಿಸಿದ ನೂರಾರು ಕಾರ್ಯಕರ್ತರು ಪಟಾಕಿ ಸಿಡಿಸಿ ಪರಸ್ಪರ ಸಿಹಿ ಹಂಚಿ, ಪಕ್ಷದ ಪರವಾಗಿ ಜಯ ಘೋಷಗಳನ್ನು ಮೊಳಗಿಸಿ ಸಂಭ್ರಮಿಸಿದರು.

ಈ ಸಂದರ್ಭ ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಮಾತನಾಡಿ, ಪಶ್ಚಿಮ ಬಂಗಾಳ, ಪುದಚೇರಿ, ಆಸ್ಸಾಂನಲ್ಲಿ ಭರ್ಜರಿ ಗೆಲುವನ್ನು ಬಿಜೆಪಿ ದಾಖಲಿಸಿದೆ, ಜನತೆ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಅಪಾರ ಒಲವು ಹೊಂದಿದ್ದಾರೆ ಎಂಬುದಕ್ಕೆ ಸಾಕ್ಷಿ, ಅನೇಕ ವರುಷಗಳಿಂದ ಅಧಿಕಾರದಲ್ಲಿದ್ದ ತೃಣಮೂಲ ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅರಳಿದೆ, ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಹಾಗೂ ಮಮತಾ‌ ಬ್ಯಾನರ್ಜಿ ಅವರ ಕಾರ್ಯವೈಖರಿಯಿಂದ ಬೇಸತ್ತಿದ್ದ ಬಂಗಾಳದ ಜನತೆ ನಿರೀಕ್ಷೆಯಂತೆ ಬಿಜೆಪಿಗೆ ಬೆಂಬಲಿಸಿದ್ದಾರೆ, ಈಗ ಅಲ್ಲಿ ಅಭಿವೃದ್ಧಿ ಪರ್ವ ಆರಂಭಾಗಲಿದೆ ಎಂದರು.

ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಮಾತನಾಡಿ, ಮಮತಾ ಬ್ಯಾನರ್ಜಿ ಅಕ್ರಮ ಬಾಂಗ್ಲಾ ನಿವಾಸಿಗಳನ್ನು ಪೋಷಿಸಿದರು, ಆದರೆ ಅಲ್ಲಿನ ಮತದಾರರು ತಕ್ಕ ಪಾಠ ಕಲಿಸಿದ್ದಾರೆ, ದರ್ಪದಿಂದ‌ ಮೆರೆಯುತ್ತಿದ್ದ ‌ಮಮತಾ ಬ್ಯಾನರ್ಜಿ ಅವರಿಗೆ ಸೋಲಿನ ರುಚಿ ತೋರಿಸಿದ್ದಾರೆ, ಪ್ರಧಾನಿ ನರೇಂದ್ರ ಮೋದಿಜಿ ಅವರ ಆಡಳಿತ ಅವಧಿಯಲ್ಲಿ ಆಗುತ್ತಿರುವ ಅಭಿವೃದ್ಧಿ ಯೋಜನೆಗಳಿಂದಾಗಿಯೇ ಜನತೆ ಬಿಜೆಪಿ ಜೊತೆ ನಿಂತಿದ್ದಾರೆ ಎಂದರು.

ಇದನ್ನೂ ಓದಿ:

ಬಿಜೆಪಿ ಮುಖಂಡ ವಿಜುಗೌಡ ಪಾಟೀಲ ಮಾತನಾಡಿ, ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಗೆಲುವಿನ ನಗೆ ಬೀರಿದೆ, ಪ್ರತಿಪಕ್ಷಗಳು ಬಿಜೆಪಿಯ ಬಗ್ಗೆ ಸಾಕಷ್ಟು ಅಪಪ್ರಚಾರ ಮಾಡಿದರೂ ಸಹ ಜನತೆ ಅದಕ್ಕೆ ಸೊಪ್ಪು ಹಾಕದೇ ಪ್ರಧಾನಿ ಮೋದಿಜಿ ಉತ್ತಮ ಆಡಳಿತ ಕಾರಣದಿಂದಾಗಿ ಅಭಿವೃದ್ಧಿಗಾಗಿ ಬಿಜೆಪಿ ಬೆಂಬಲಿಸಿ ಜನಾದೇಶ ನೀಡಿದ್ದಾರೆ ಎಂದರು.

ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಸ್ವಪ್ನಾ ಕಣಮುಚನಾಳ ಮಾತನಾಡಿ, ಮಹಿಳಾ ಮೀಸಲಾತಿ ವಿರೋಧಿಸಿ ಮಹಿಳಾ ರಾಜಕೀಯ ಪ್ರಾತಿನಿಧ್ಯದ ವಿರುದ್ದವಾಗಿ ನಡೆದುಕೊಂಡ ಕಾಂಗ್ರೆಸ್ ಹಾಗೂ ಅದರ ಮಿತ್ರ ಪಕ್ಷಗಳಿಗೆ ಮಹಿಳೆಯರು ತಕ್ಕ ಶಾಸ್ತಿ ಮಾಡಿದ್ದಾರೆ, ಮತ್ತೊಮ್ಮೆ ಪ್ರಧಾನಿ ಮೋದಿಜಿ ಅವರ ಪರಿಶುದ್ಧ ಆಡಳಿತ ಮೆಚ್ಚಿ ಬಿಜೆಪಿಗೆ ಬೆಂಬಲಿಸಿದ್ದಾರೆ ಎಂದರು.

ಡಾ. ಸುರೇಶ ಬಿರಾದಾರ, ಮಳುಗೌಡ ಪಾಟೀಲ, ಈರಣ್ಣ ರಾವೂರ, ಉಮೇಶ ಕೋಳಕೂರ, ಶಿಲ್ಪಾ ಕುದುರಗೊಂಡ, ಸಂದೀಪ ಪಾಟೀಲ, ಭೀಮಾಶಂಕರ ಹದನೂರ, ಕೃಷ್ಣಾ ಗುನ್ಹಾಳಕರ, ರಾಜು ಮಗಿಮಠ, ಭರತ ಕೋಳಿ, ವಿಜಯ ಜೋಶಿ, ಶ್ರೀದೇವಿ ಔಧಿ, ಬಸಮ್ಮಾ ಗುಜರಿ, ಪ್ರಿಯಾಂಕಾ ಶೇರಖಾನೆ ಇದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !