ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಸ್‌ನೊಳಗೆ ನಿಂತರೆ ಅದರ ಛಾವಣಿ ತಲೆಗೆ ಬಡಿಯುವಷ್ಟು ಉದ್ದವಿರುವ ಕಂಡಕ್ಟರ್ ಒಬ್ಬರಿಗೆ ತೆಲಂಗಾಣ ರಾಜ್ಯ ಸಾರಿಗೆ ಸಂಸ್ಥೆ ಕಚೇರಿಯಲ್ಲಿ ಮಾಡುವಂತಹ ಕೆಲಸವನ್ನು ನೀಡಿ ಮಾನವೀಯತೆ ಮೆರೆದಿದೆ.
ಕಂಡಕ್ಟರ್ ಅಂದಮೇಲೆ ದಿನದ ಮುಕ್ಕಾಲು ಭಾಗ ನಿಂತೇ ಇರಬೇಕು, ಓಡಾಡುತ್ತಾ ಟಿಕೆಟ್ ಪಡೆಯಬೇಕು. ಆದರೆ ಹೈದರಾಬಾದ್ ನಗರದ ಮೆಹದಿಪಟ್ನಂ ಡಿಪೋಗೆ ಸೇರಿದ ಕಂಡಕ್ಟರ್ ಅಮೀನ್ ಅಹಮದ್ ಅನ್ಸಾರಿ ಅತೀ ಉದ್ದ ಇರುವ ಕಾರಣ ಬಸ್‌ನಲ್ಲಿ ಸದಾ ಕುತ್ತಿಗೆ ಬಗ್ಗಿಸಿಕೊಂಡು, ಇಲ್ಲ ಪಕ್ಕಕ್ಕೆ ತಿರುಗಿಸಿಕೊಂಡೇ ಇರಬೇಕು. ಅವರ ಸಂಕಷ್ಟವನ್ನು ಅರಿತು ಕಂಡಕ್ಟರ್ ಕೆಲಸ ಬಿಟ್ಟು ಬೇರೆ ಕೆಲಸವನ್ನು ನೀಡಲಾಗಿದೆ.
198 ಸೆಂಟಿಮೀಟರ್ ಅಷ್ಟು ಎತ್ತರವಿರುವ ಅನ್ಸಾರಿ ಬಸ್‌ನೊಳಗೆ ಟಿಕೆಟ್ ನೀಡುವ ಕೆಲಸವನ್ನು ಮಾಡಲು ಸಾಧ್ಯವಾಗುತ್ತಿರಲಿಲ್ಲ. ಹಾಗಾಗಿ ಈ ಹಿಂದೆ ಅವರಿಗೆ ಒಂದು ವರ್ಷದ ಅವಧಿಗೆ ಪರ್ಯಾಯ ಕೆಲಸ ನೀಡಲಾಗಿತ್ತು. ಬಸ್‌ನ ಒಳಗೆ ಮೇಲ್ಚಾವಣಿ ಕಡಿಮೆ ಇರುವುದರಿಂದ ಮತ್ತು ಕಿರಿದಾದ ದಾರಿಯಲ್ಲಿ ಓಡಾಡಿಕೊಂಡು ಕೆಲಸ ಮಾಡುವುದು ಅವರಿಗೆ ದೈಹಿಕವಾಗಿ ಕಷ್ಟವಾಗಿತ್ತು.
ಆದರೆ, ಏಪ್ರಿಲ್ 28 ಕ್ಕೆ ಅವರ ಪರ್ಯಾಯ ಕೆಲಸದ ಅವಧಿ ಮುಗಿದಿತ್ತು. ಅದು ತಕ್ಷಣಕ್ಕೆ ವಿಸ್ತರಣೆಯಾಗದ ಕಾರಣ ಅವರು ಮತ್ತೆ ಕಂಡಕ್ಟರ್ ಕೆಲಸಕ್ಕೆ ಮರಳಬೇಕಾಯಿತು. ಈ ಸಮಯದಲ್ಲಿ ಬಸ್‌ನೊಳಗೆ ಸದಾ ಬಗ್ಗಿಕೊಂಡೇ ಕೆಲಸ ಮಾಡಬೇಕಾದ್ದರಿಂದ ಅವರಿಗೆ ತೀವ್ರವಾದ ಕುತ್ತಿಗೆ ಮತ್ತು ಬೆನ್ನು ನೋವು ಕಾಣಿಸಿಕೊಂಡಿತ್ತು.
ಅವರ ಆರೋಗ್ಯ ಸ್ಥಿತಿ ಮತ್ತು ಎತ್ತರದಿಂದ ಉಂಟಾಗುವ ಸವಾಲುಗಳನ್ನು ಪರಿಗಣಿಸಿದ ಟಿಜಿಎಸ್‌ಆರ್‌ಟಿಸಿ, ಈಗ ತಕ್ಷಣದಿಂದ ಜಾರಿಗೆ ಬರುವಂತೆ ಅವರಿಗೆ ಮತ್ತೆ ಪರ್ಯಾಯ ಕೆಲಸವನ್ನು ನೀಡಿದೆ. ಹೊಸ ಆದೇಶದ ಪ್ರಕಾರ, ಅವರ ಸೇವೆಯನ್ನು ಬಸ್ ಪಾಸ್ ವಿಭಾಗ ಅಥವಾ ರಾಜೀವ್ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಂತಹ ಕಡೆಗಳಲ್ಲಿ ಕೆಲಸ ಮಾಡಬಹುದಾಗಿದೆ.
ಸಾರಿಗೆ ಸಂಸ್ಥೆಯ ಈ ನಿರ್ಧಾರಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ನೌಕರರ ಹಿತದೃಷ್ಟಿಯಿಂದ ಮತ್ತು ಕೆಲಸದ ಸ್ಥಳದಲ್ಲಿ ಹೊಂದಾಣಿಕೆ ಮಾಡಿಕೊಳ್ಳುವ ಮೂಲಕ ಸಂಸ್ಥೆಯು ಉತ್ತಮ ಉದಾಹರಣೆ ನೀಡಿದೆ ಎಂದು ಅನೇಕರು ಶ್ಲಾಘಿಸಿದ್ದಾರೆ. ಸಾರ್ವಜನಿಕ ವಲಯದ ಉದ್ಯೋಗಗಳಲ್ಲಿ ಕೆಲಸಗಾರರ ದೈಹಿಕ ಸ್ಥಿತಿಗೆ ಅನುಗುಣವಾಗಿ ಸೌಲಭ್ಯಗಳನ್ನು ಒದಗಿಸುವುದು ಎಷ್ಟು ಮುಖ್ಯ ಎಂಬುದನ್ನು ಈ ಘಟನೆ ಒತ್ತಿಹೇಳಿದೆ.



