May 6, 2026
Wednesday, May 6, 2026
spot_img

ಬೆಂಗಳೂರಿಗರಿಗೆ ಡಬಲ್‌ ಧಮಾಕ, ಲಾಲ್‌ಬಾಗ್‌ & ಕಬ್ಬನ್‌ಪಾರ್ಕ್‌ನಲ್ಲಿ ಮಾವು-ಹಲಸು ಮೇಳ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಇದೇ ಮೊದಲ ಬಾರಿಗೆ ಬೆಂಗಳೂರಿನ ಪ್ರಸಿದ್ಧ ಉದ್ಯಾನವನಗಳಾದ ಕಬ್ಬನ್ ಪಾರ್ಕ್ ಮತ್ತು ಲಾಲ್‌ಬಾಗ್‌ನಲ್ಲಿ ಮಾವು ಮತ್ತು ಹಲಸಿನ ಮೇಳಗಳನ್ನು ಆಯೋಜಿಸಲಾಗುತ್ತಿದೆ. ಎರಡು ಕಡೆ ಪ್ರತ್ಯೇಕವಾಗಿ ಮಾವು ಹಾಗೂ ಹಲಸಿನ ಮೇಳೆ ನಡೆಯುತ್ತಿರುವುದು ಇದೇ ಮೊದಲು.

ಈ ಬಗ್ಗೆ ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ಟಿ.ಆರ್. ವೇದಮೂರ್ತಿ ಮಾತನಾಡಿ, ಧಾರವಾಡ, ಮಂಡ್ಯ, ಮೈಸೂರು ಹಾಗೂ ದಕ್ಷಿಣ ಕರ್ನಾಟಕದ ರೈತರಿಗಾಗಿ ಇದೇ ಮೇ 8 ರಿಂದ 18 ರವರೆಗೆ ಕಬ್ಬನ್ ಪಾರ್ಕ್‌ನಲ್ಲಿ ಈ ಮೇಳ ನಡೆಯಲಿದೆ ಎಂದು ತಿಳಿಸಿದ್ದಾರೆ.

ಇದೇ ಸ್ಥಳದಲ್ಲಿ ಮೇ ತಿಂಗಳ ಅಂತ್ಯದಲ್ಲಿ ಮತ್ತೊಂದು ಮೇಳ ನಡೆಯಲಿದ್ದು, ಅಲ್ಲಿ 100ಕ್ಕೂ ಹೆಚ್ಚು ಮಳಿಗೆಗಳನ್ನು ಹಾಕಲಾಗುವುದು. ಇಲ್ಲಿ ಬಗೆಬಗೆಯ ಮಾವಿನಹಣ್ಣು, ಹಲಸಿನಹಣ್ಣು, ಮಾವು ಹಾಗೂ ಹಲಸಿನಿಂದ ಮಾಡಿದ ಖಾದ್ಯಗಳು ಕೂಡ ಲಭ್ಯವಿದೆ. ಇದರ ದಿನಾಂಕಗಳನ್ನು ಇನ್ನಷ್ಟೆ ನಿಗದಿಪಡಿಸಬೇಕಿದೆ ಎಂದಿದ್ದಾರೆ.

ಇನ್ನು, ಇತ್ತೀಚೆಗೆ ರೈತರೊಂದಿಗೆ ಸಭೆ ನಡೆಸಿದಾಗ, ಬೇಗ ಬೆಳೆ ಬಂದಿರುವುದು ಮತ್ತು ಮಾರುಕಟ್ಟೆಯಲ್ಲಿ ಸರಿಯಾದ ಬೆಲೆ ಸಿಗದ ಬಗ್ಗೆ ಅವರು ಆತಂಕ ವ್ಯಕ್ತಪಡಿಸಿದರು. ಹಾಗಾಗಿ ಅವರಿಗಾಗಿ ಕಬ್ಬನ್ ಪಾರ್ಕ್‌ನಲ್ಲಿ ಈ ಮೇಳ ಆಯೋಜಿಸಲಾಗಿದ್ದು, ಈ ಮೇಳದಲ್ಲಿ ಸುಮಾರು 70 ಮಳಿಗೆಗಳಲ್ಲಿ ರೈತರು ನೇರವಾಗಿ ಸಾವಯವ ಮತ್ತು ಕಾರ್ಬೈಡ್ ಮುಕ್ತ ಹಣ್ಣುಗಳನ್ನು ಮಾರಾಟ ಮಾಡಲಿದ್ದಾರೆ ಎಂದು ತಿಳಿಸಿದ್ದಾರೆ.

ಕರ್ನಾಟಕದಲ್ಲಿ ಈ ಬಾರಿ ಇಳುವರಿ ವಿಳಂಬವಾಗಿದ್ದು, ಕೋಲಾರ ಮತ್ತು ರಾಮನಗರದ ಬೆಳೆ ಕ್ರಮವಾಗಿ ಮೇ 8 ಮತ್ತು ಮೇ 27 ರ ವೇಳೆಗೆ ಮಾರುಕಟ್ಟೆಗೆ ಬರಲಿದೆ. ತೀವ್ರ ಶಾಖ ಮತ್ತು ವಾತಾವರಣದಲ್ಲಿನ ಕಡಿಮೆ ತೇವಾಂಶದಿಂದಾಗಿ ಹೆಚ್ಚಿನ ಹಣ್ಣುಗಳು ಉದುರಿವೆ. ಇದು ಹಣ್ಣಿನ ಪ್ರಮಾಣ ಮತ್ತು ಗುಣಮಟ್ಟದ ಮೇಲೆ ಪರಿಣಾಮ ಬೀರಿದೆ. ಕಳೆದ ವರ್ಷ 15 ಲಕ್ಷ ಟನ್ ಇಳುವರಿ ಬಂದಿತ್ತು, ಆದರೆ ಈ ವರ್ಷ ಸುಮಾರು 10 ಲಕ್ಷ ಟನ್ ಇಳುವರಿ ನಿರೀಕ್ಷಿಸುತ್ತಿದ್ದೇವೆ. ಕಳೆದ ವರ್ಷ 1,000 ಟನ್ ಹಣ್ಣು ರಫ್ತಾಗಿತ್ತು, ಆದರೆ ಈ ವರ್ಷ ಇದುವರೆಗೆ ಕೇವಲ 50-100 ಟನ್ ಮಾತ್ರ ರಫ್ತು ಮಾಡಲು ಸಾಧ್ಯವಾಗಿದೆ ಎಂದು ವಿವರಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !