ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಐಪಿಎಲ್ ಅಬ್ಬರ ಇನ್ನೇನು ಕೆಲವು ದಿನಗಳಲ್ಲಿ ಮುಕ್ತಾಯವಾಗಲಿದ್ದು, ಈಗಾಗಲೇ ಲೀಗ್ ಪಂದ್ಯಗಳು ಮುಗಿದು ಫೈನಲ್ ನತ್ತ ಸಾಗುತ್ತಿದೆ. ಇದರ ನಡುವೆ ಈ ಬಾರಿ ಫೈನಲ್ ಪಂದ್ಯದ ಆತಿಥ್ಯವನ್ನು ಬೆಂಗಳೂರು ವಹಿಸಲಿದೆ ಎಂದು ಕಾತುರದಿಂದ ಕಾಯುತ್ತಿದ್ದ ಕನ್ನಡಿಗರಿಗೆ ನಿರಾಸೆ ಮೂಡಿದೆ.
ಬಿಸಿಸಿಐಯು ಮುಂದಿನ ಪ್ಲೇ ಆಫ್ ಸುತ್ತಿನ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಫೈನಲ್ ಮ್ಯಾಚ್ ಅನ್ನು ಬೆಂಗಳೂರಿನ ಬದಲಿಗೆ ಅಹಮದಾಬಾದ್ನ ನರೇಂದ್ರ ಮೋದಿ ಮೈದಾನದಲ್ಲಿ ಸ್ಥಳಾಂತರ ಮಾಡಿದೆ. ಇದರಿಂದ ಕನ್ನಡಿಗರಿಗೆ ಹಾಗೂ ಆರ್ಸಿಬಿ ಫ್ಯಾನ್ಸ್ ಬೇಸರ ವ್ಯಕ್ತಪಡಿಸಿದ್ದಾರೆ.
ನಿಯಮದಂತೆ ಹಾಲಿ ಚಾಂಪಿಯನ್ ತವರು ಮೈದಾನ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಫೈನಲ್ ಪಂದ್ಯ ನಡೆಯಬೇಕು. ಆದರೆ ಬಿಸಿಸಿಐ ತನ್ನ ನಿರ್ಧಾರವನ್ನು ಬದಲಾಯಿಸಿದ್ದು, ಇದರ ಹಿಂದಿರುವ ಕಾರಣವನ್ನು ಸಹ ತಿಳಿಸಿದೆ.
ಈ ಕುರಿತು ಮಾಹಿತಿ ನೀಡಿದ ಬಿಸಿಸಿಐ, ನಾವು ಈ ಮೊದಲು ಬೆಂಗಳೂರಿನಲ್ಲಿ ಫೈನಲ್ ಪಂದ್ಯವನ್ನು ನಡೆಸಲು ನಿರ್ಧರಿಸಿದ್ದೆವು. ಆದರೆ ಅಲ್ಲಿನ ಸ್ಥಳೀಯ ಸಂಘ ಮತ್ತು ಅಧಿಕಾರಿಗಳು ತಮ್ಮ ನಿಯಮ ಮತ್ತು ಶಿಷ್ಟಾಚಾರದ ವಿರುದ್ಧದ ಕೆಲ ಆದ್ಯತೆಗಳನ್ನು ಬಯಸಿದ್ದರು. ಹೀಗಾಗಿ ನಮ್ಮ ಮುಂದೆ ಫೈನಲ್ ಪಂದ್ಯವನ್ನು ಸ್ಥಳಾಂತರಿಸುವುದು ಕೊನೆಯ ಆಯ್ಕೆಯಾಗಿತ್ತು ಎಂದು ತಿಳಿಸಿದೆ.
ಈಗಾಗಲೇ 70 ಲೀಗ್ ಪಂದ್ಯಗಳು ಮುಗಿದಿದೆ. ಮೊದಲೆರಡು ಸ್ಥಾನ ಪಡೆಯುವ ತಂಡಗಳು ಮೇ 26 ರಂದು ಧರ್ಮಶಾಲಾದಲ್ಲಿ ನಡೆಯಲಿರುವ ಕ್ವಾಲಿಫೈಯರ್ 1 ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಬಳಿಕ ಗೆದ್ದ ತಂಡವು ನೇರವಾಗಿ ಫೈನಲ್ಗೇರಲಿದೆ.
ಮೇ 27 ರಂದು ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿರುವ ತಂಡಗಳು ಎಲಿಮಿನೇಟರ್ ಪಂದ್ಯವನ್ನು ಆಡಲಿದ್ದು, ಈ ಪಂದ್ಯ ನ್ಯೂ ಚಂಡೀಗಢದ ನ್ಯೂ ಇಂಟರ್ನ್ಯಾಷನಲ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಇದೇ ಮೈದಾನದಲ್ಲಿ ಎಲಿಮಿನೇಟರ್ 2 ಪಂದ್ಯ ನಡೆಯಲಿದ್ದು, ಕ್ವಾಲಿಫೈಯರ್ 1ರಲ್ಲಿ ಸೋತ ತಂಡ ಹಾಗೂ ಎಲಿಮಿನೇಟರ್ನಲ್ಲಿ ಗೆದ್ದ ತಂಡಗಳು ಮುಖಾಮುಖಿಯಾಗಲಿವೆ.
ಗೆದ್ದ ತಂಡವು ಮೇ 31 ರಂದು ಅಹಮದಾಬಾದ್ನ ನರೇಂದ್ರ ಮೋದಿ ಮೈದಾನದಲ್ಲಿ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಕ್ವಾಲಿಫೈಯರ್ 1 ಗೆದ್ದ ತಂಡದೊಂದಿಗೆ ಪ್ರಶಸ್ತಿಗಾಗಿ ಸೆಣಸಲಿದೆ ಎಂದಿದೆ.



