May 6, 2026
Wednesday, May 6, 2026
spot_img

ಅಹಮದಾಬಾದ್‌ ಪಾಲಾದ ಐಪಿಎಲ್ 2026 ಫೈನಲ್ ಆತಿಥ್ಯ! ಡಿಕೆಶಿ ಹೇಳಿದ್ದೇನು?

ಹೊಸದಿಗಂತ ಡಿಜಿಟಲ್ ಡೆಸ್ಕ್:

2026ರ ಇಂಡಿಯನ್ ಪ್ರೀಮಿಯರ್ ಲೀಗ್ ಮುಕ್ತಾಯದ ಹಂತದಲ್ಲಿದ್ದು, ಕ್ರಿಕೆಟ್ ಪ್ರೇಮಿಗಳು ಪ್ಲೇಆಫ್ಸ್ ಮತ್ತು ಫೈನಲ್ ಕದನಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ. ಆದರೆ, ಈ ನಡುವೆ ಕರ್ನಾಟಕದ ಕ್ರಿಕೆಟ್ ಅಭಿಮಾನಿಗಳಿಗೆ ಬಿಸಿಸಿಐ ಬಿಗ್ ಶಾಕ್ ನೀಡಿದೆ. ನಿಯಮದಂತೆ ಹಾಲಿ ಚಾಂಪಿಯನ್ ತವರು ಮೈದಾನ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ಫೈನಲ್ ಪಂದ್ಯವನ್ನು ಈಗ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂಗೆ ಸ್ಥಳಾಂತರಿಸಲಾಗಿದೆ.

ಸಾಮಾನ್ಯವಾಗಿ ಹಿಂದಿನ ಸೀಸನ್‌ನ ಚಾಂಪಿಯನ್ ತಂಡದ ತವರು ಮೈದಾನದಲ್ಲಿ ಫೈನಲ್ ನಡೆಯುವುದು ಐಪಿಎಲ್ ಸಂಪ್ರದಾಯ. ಆದರೆ, ಈ ಬಾರಿ ಸ್ಥಳೀಯ ಸಂಘಟನೆ ಮತ್ತು ಅಧಿಕಾರಿಗಳ ಕೆಲವು “ವಿಶೇಷ ಬೇಡಿಕೆಗಳು” ಬಿಸಿಸಿಐ ಮಾರ್ಗಸೂಚಿಗಳನ್ನು ಮೀರಿರುವ ಕಾರಣ, ಅನಿವಾರ್ಯವಾಗಿ ಪಂದ್ಯವನ್ನು ಅಹಮದಾಬಾದ್‌ಗೆ ಶಿಫ್ಟ್ ಮಾಡಲಾಗಿದೆ ಎಂದು ಬಿಸಿಸಿಐ ತಿಳಿಸಿದೆ. ಇದರಿಂದಾಗಿ ಬೆಂಗಳೂರು ಪ್ಲೇಆಫ್‌ ಆತಿಥ್ಯದಿಂದಲೂ ವಂಚಿತವಾಗಿದೆ.

ಶಾಸಕರಿಗೆ ಐಪಿಎಲ್ ಟಿಕೆಟ್ ನೀಡುವ ವಿಚಾರವಾಗಿ ಉಂಟಾದ ಗೊಂದಲವೇ ಪಂದ್ಯ ಸ್ಥಳಾಂತರಕ್ಕೆ ಕಾರಣ ಎಂಬ ಮಾತುಗಳು ಕೇಳಿಬರುತ್ತಿದ್ದವು. ಈ ಬಗ್ಗೆ ಪ್ರತಿಕ್ರಿಯಿಸಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, “ಶಾಸಕರ ಟಿಕೆಟ್‌ಗೂ ಮತ್ತು ಪಂದ್ಯ ಸ್ಥಳಾಂತರಕ್ಕೂ ಯಾವುದೇ ಸಂಬಂಧವಿಲ್ಲ. ಬೇರೆ ರಾಜ್ಯಗಳಲ್ಲಿ ಶೇ. 50ರಷ್ಟು ಸೀಟುಗಳನ್ನು ನೀಡುವ ಪದ್ಧತಿ ಇರಬಹುದು. ಬಹುಶಃ ಅಹಮದಾಬಾದ್‌ನಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನ ಸೇರಬಹುದು ಎಂಬ ಕಾರಣಕ್ಕೆ ಅಲ್ಲಿಗೆ ಸ್ಥಳಾಂತರಿಸಿರಬಹುದು ಅಷ್ಟೇ,” ಎಂದು ಹೇಳಿದರು.

ಅಲ್ಲದೆ, “ಟಿಕೆಟ್ ವಿಚಾರವಾಗಿ ಪಂದ್ಯ ಶಿಫ್ಟ್ ಮಾಡಲಾಗುತ್ತಿದೆ ಎಂದು ಯಾರು ಹೇಳಿದ್ದು? ಬಿಸಿಸಿಐ ಅಧಿಕೃತವಾಗಿ ಹೇಳಿಕೆ ನೀಡಲಿ, ಆಮೇಲೆ ನಾನು ಅವರಿಗೆ ಉತ್ತರ ಕೊಡುತ್ತೇನೆ” ಎಂದು ಡಿಕೆಶಿ ಖಡಕ್ ಆಗಿ ತಿಳಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !