May 6, 2026
Wednesday, May 6, 2026
spot_img

ಗ್ಯಾರಂಟಿ ಕುರಿತು ವಿಶ್ವಾಸವಿದ್ದರೆ 15 ದಿನ ಬಾಗಲಕೋಟೆಯಲ್ಲಿ ಸಿಎಂ ವಾಸ್ತವ್ಯ ಇದ್ದರೇಕೆ? ಬಿ.ವೈ.ವಿಜಯೇಂದ್ರ ಪ್ರಶ್ನೆ

ಹೊಸ ದಿಗಂತ ವರದಿ,ಚಿತ್ರದುರ್ಗ:

ಕಾಂಗ್ರೆಸ್ ನವರು ಗ್ಯಾರಂಟಿಗಳಿಂದ ಬೀಗುತ್ತಿದ್ದಾರೆ. ನಿಮ್ಮ ಗ್ಯಾರಂಟಿಗಳ ಬಗ್ಗೆ ಅಷ್ಟೊಂದು ವಿಶ್ವಾಸ ಇದ್ದರೆ ಸಿಎಂ ಏಕೆ ೧೫ ದಿನಗಳ ಕಾಲ ಬಾಗಲಕೋಟೆಗೆ ಬಂದು ಕೂರಬೇಕಾಗಿತ್ತು ಎಂದು ಬಿಜೆಪಿ ರಾಜ್ಯಾಧ್ಯಕ್ಷ, ಶಾಸಕ ಬಿ.ವೈ.ವಿಜಯೇಂದ್ರ ಪ್ರಶ್ನಿಸಿದರು.

ಚಿತ್ರದುರ್ಗದಲ್ಲಿ ಬುಧವಾರ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಗೃಹಲಕ್ಷ್ಮಿ ಯೋಜನೆ ಚುನಾವಣಾ ಲಕ್ಷ್ಮಿಯಾಗಿ ಪರಿವರ್ತನೆಯಾಗಿದೆ. ಇವರು ಬಡವರಿಗೆ ಯೋಜನೆಗಳನ್ನು ನೀಡಲಿ. ಇವರೊಬ್ಬರೇ ಯೋಜನೆಗಳನ್ನು ನೀಡಿಲ್ಲ. ಯಡಿಯೂರಪ್ಪನವರು ಹಿಂದೆ ಭಾಗ್ಯಲಕ್ಷ್ಮಿ, ಸಂಧ್ಯಾ ಸುರಕ್ಷಾ, ಬೈಸಿಕಲ್ ಯೋಜನೆಗಳನ್ನು ನೀಡಿದ್ದರು. ಇನ್ನೂ ಹಲವು ಒಳ್ಳೆಯ ಯೋಜನೆ ಕೊಟ್ಟಿದ್ದಾರೆ. ಬಾಕಿಯಿದ್ದ ಗೃಹಲಕ್ಷ್ಮಿ ಹಣವನ್ನು ಉಪಚುನಾವಣೆ ಸಂದರ್ಭದಲ್ಲಿ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಮತ್ತೆ ಬಾಕಿ ಉಳಿಸಿಕೊಂಡು ಜಿ.ಪಂ., ತಾ.ಪಂ. ಚುನಾವಣೆ ಸಂದರ್ಭದಲ್ಲಿ ನೀಡಬಹುದು ಎಂದು ಕಿಡಿಕಾರಿದರು.

ಉಪ ಚುನಾವಣೆಯ ಸೋಲಿನಿಂದ ನಾವು ಹತಾಶರಾಗುವ ಪ್ರಶ್ನೆಯಿಲ್ಲ. ಪ್ರಧಾನಮಂತ್ರಿ ನರೇಂದ್ರ ಮೋದ ಅವರಂತಹ ದಿಟ್ಟ ನಾಯಕತ್ವ ದೇಶಕ್ಕೆ ಸಿಕ್ಕಿದೆ. ನಿತಿನ್ ನಬಿನ್ ಅವರು ಒಬ್ಬ ಯುವ ರಾಷ್ಟ್ರೀಯ ಅಧ್ಯಕ್ಷರು ನೇತೃತ್ವ ವಹಿಸಿಕೊಂಡಿದ್ದಾರೆ. ಅಮಿತ್ ಶಾ ಅವರಂತಹ ಚುನಾವಣಾ ಚಾಣಕ್ಯ ನಮ್ಮ ಜೊತೆಗಿದ್ದಾರೆ. ಉಪ ಚುನಾವಣೆ ಸೋಲಿನ ಸಂಬಂಧ ತಲೆಕೆಡಿಸಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

ಪ್ರತಿ ತಿಂಗಳ ಬದಲು ಅದನ್ನು ತಡೆಹಿಡಿದು ಉಪ ಚುನಾವಣೆಯಲ್ಲಿ ಮೊನ್ನೆ ಬಿಡುಗಡೆ ಮಾಡಿದ್ದಾರೆ. ಇನ್ನು ಮುಂದಿನ ಕಂತನ್ನು ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆ ಬಂದಾಗಲೇ ಬಿಡುಗಡೆ ಮಾಡಲಿದ್ದಾರೆ ಎಂದು ತಿಳಿಸಿದರು. ಇವರು ಜನರಿಗೆ ಆಮಿಷವೊಡ್ಡುವ ರೀತಿಯಲ್ಲಿ ಯೋಜನೆ ನೀಡುತ್ತಿದ್ದಾರೆ. ಯಡಿಯೂರಪ್ಪನವರು ಮುಖ್ಯಮಂತ್ರಿ ಇದ್ದಾಗ ದೂರದೃಷ್ಟಿಯಿಂದ ಭಾಗ್ಯಲಕ್ಷ್ಮಿ ಯೋಜನೆ ಅನುಷ್ಠಾನಕ್ಕೆ ತಂದಿದ್ದರು. ಈ ಉಪ ಚುನಾವಣೆ ಸೋಲಿನಿಂದ ಬಿಜೆಪಿ, ಬಿಜೆಪಿ ಕಾರ್ಯಕರ್ತರು ಹೆದರಿಕೊಳ್ಳುವ ಪ್ರಶ್ನೆಯೇ ಇಲ್ಲ. ಇವೆಲ್ಲವನ್ನೂ ಮೀರಿ ಸಂಘಟನೆ ಬಲಪಡಿಸುತ್ತೇವೆ. ಹಿರಿಯರ ಆಶೀರ್ವಾದದಿಂದ ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರುತ್ತೇವೆ ಎಂದು ವಿಶ್ವಾಸದಿಂದ ನುಡಿದರು.

ಜನರ ಕ್ಷಮೆ ಕೇಳಲು ಒತ್ತಾಯ : ಮತಗಳ್ಳತನದ ವಿರುದ್ಧ ರಾಹುಲ್ ಗಾಂಧಿಯವರು ಪ್ರವಾಸ ಮಾಡಿದ್ದರು. ರಾಜ್ಯ ಹೈಕೋರ್ಟಿನ ಆದೇಶದಂತೆ ಶೃಂಗೇರಿಯಲ್ಲಿ ಮರು ಮತಎಣಿಕೆ ನಡೆದು ಬಿಜೆಪಿ ಅಭ್ಯರ್ಥಿ ಜೀವರಾಜ್ ಗೆದ್ದಿದ್ದಾರೆ. ರಾಹುಲ್ ಗಾಂಧಿಯವರು ಈಗ ದೇಶದ ಜನರ ಕ್ಷಮೆ ಕೇಳಬೇಕು. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ರಾಜ್ಯದ ಜನರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.

ಬಾಬಾ ಸಾಹೇಬ್ ಅಂಬೇಡ್ಕರ್, ಸಂವಿಧಾನದ ಬಗ್ಗೆ ಕಾಂಗ್ರೆಸ್ಸಿನವರು ಬಹಳ ಮುದ್ದಾಗಿ ಮಾತನಾಡುತ್ತಾರೆ. ಆದರೆ, ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನಕ್ಕೆ ಅಪಚಾರ ಮಾಡುವ ಕೆಲಸವನ್ನು ಕಾಂಗ್ರೆಸ್ಸಿನವರು, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರು ಮಾಡುತ್ತಿದ್ದಾರೆ ಎಂದು ಟೀಕಿಸಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !