ಹೊಸದಿಗಂತ ಡಿಜಿಟಲ್ ಡೆಸ್ಕ್:
ಐಪಿಎಲ್ ಮಧ್ಯೆ ಆಟಗಾರರ ವರ್ತನೆಗೆ ಸಂಬಂಧಿಸಿದ ಮತ್ತೊಂದು ವಿವಾದ ಚರ್ಚೆಗೆ ಕಾರಣವಾಗಿದೆ. ಪಂಜಾಬ್ ಕಿಂಗ್ಸ್ ತಂಡದ ಸ್ಪಿನ್ನರ್ ಯುಜ್ವೇಂದ್ರ ಚಾಹಲ್ ಇ-ಸಿಗರೇಟ್ ಬಳಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಕ್ರಿಕೆಟ್ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ತಂಡದ ಪ್ರಯಾಣದ ವೇಳೆ ವಿಮಾನದಲ್ಲೇ ಚಾಹಲ್ ಇ-ಸಿಗರೇಟ್ ಸೇದುತ್ತಿರುವ ದೃಶ್ಯ ಸೆರೆಹಿಡಿಯಲಾಗಿದೆ ಎನ್ನಲಾಗುತ್ತಿದೆ. ಆರಂಭದಲ್ಲಿ ಈ ವಿಡಿಯೋ ತಂಡದ ಅಧಿಕೃತ ಖಾತೆಯಲ್ಲೇ ಕಾಣಿಸಿಕೊಂಡಿದ್ದರೂ, ವಿವಾದ ತೀವ್ರವಾಗುತ್ತಿದ್ದಂತೆ ಅದನ್ನು ತೆಗೆದುಹಾಕಲಾಗಿದೆ. ಆದರೆ ಅದಕ್ಕೂ ಮುನ್ನವೇ ವಿಡಿಯೋ ಅನೇಕ ಖಾತೆಗಳಲ್ಲಿ ಹರಡಿದ್ದು, ನೆಟ್ಟಿಗರ ಟೀಕೆಗೆ ಕಾರಣವಾಗಿದೆ.
ವಿಮಾನದಲ್ಲಿ ಧೂಮಪಾನ ಅಥವಾ ಇ-ಸಿಗರೇಟ್ ಬಳಕೆ ಕಟ್ಟುನಿಟ್ಟಾಗಿ ನಿಷೇಧಿತವಾಗಿದೆ. ಸುರಕ್ಷತಾ ಕಾರಣಗಳಿಂದ ಇಂತಹ ವರ್ತನೆಯನ್ನು ಗಂಭೀರ ಉಲ್ಲಂಘನೆ ಎಂದು ಪರಿಗಣಿಸಲಾಗುತ್ತದೆ. ದೂರು ದಾಖಲಾಗಿದ್ರೆ ಕಾನೂನು ಕ್ರಮ ಎದುರಿಸುವ ಸಾಧ್ಯತೆಯೂ ಇದೆ ಎಂಬ ಚರ್ಚೆ ಶುರುವಾಗಿದೆ.
ಇದಕ್ಕೂ ಮುನ್ನ ಕಾರು ಚಲಾಯಿಸುವ ವೇಳೆ ಸಿಗರೇಟ್ ಹೊರಗೆ ಎಸೆದ ಆರೋಪದಲ್ಲೂ ಚಾಹಲ್ ಟೀಕೆಗೆ ಗುರಿಯಾಗಿದ್ದರು. ಇದೀಗ ಮತ್ತೆ ಇದೇ ರೀತಿಯ ವಿವಾದ ಎದುರಾಗಿರುವುದು ಅಭಿಮಾನಿಗಳಲ್ಲೂ ಅಚ್ಚರಿ ಮೂಡಿಸಿದೆ. ಮೈದಾನದ ಹೊರಗಿನ ಇಂತಹ ಘಟನೆಗಳು ಆಟಗಾರರ ಸಾರ್ವಜನಿಕ ಇಮೇಜ್ ಮೇಲೆ ಪರಿಣಾಮ ಬೀರುತ್ತಿವೆ ಎಂಬ ಅಭಿಪ್ರಾಯ ಕೇಳಿಬರುತ್ತಿದೆ.



