October 8, 2026
Thursday, October 8, 2026

ಭುವಿ ಕಂಬ್ಯಾಕ್ ಬೆನ್ನಲ್ಲೇ ಮೊಹಮ್ಮದ್ ಶಮಿಗೆ ತೆರೆಯಿತೇ ಟೀಮ್ ಇಂಡಿಯಾ ಬಾಗಿಲು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಟೀಮ್ ಇಂಡಿಯಾದಲ್ಲಿ ಸ್ಟಾರ್ ವೇಗಿ ಮೊಹಮ್ಮದ್ ಶಮಿ ಅವರ ಯುಗ ಮುಗಿಯಿತೇ? ಈ ಪ್ರಶ್ನೆಗೆ ಸದ್ಯಕ್ಕೆ ಭಾರತೀಯ ಕ್ರಿಕೆಟ್ ಅಂಗಳದಿಂದ ಸಿಗುತ್ತಿರುವ ಸ್ಪಷ್ಟ ಉತ್ತರ ‘ಖಂಡಿತ ಇಲ್ಲ’ ಎಂಬುದು. ಅಜಿತ್ ಅಗರ್ಕರ್ ಅವರ ಅಧಿಕಾರಾವಧಿ ಮುಕ್ತಾಯಗೊಳ್ಳುತ್ತಿದ್ದಂತೆ ಭಾರತೀಯ ಆಯ್ಕೆ ಸಮಿತಿಯಲ್ಲಿ ದೊಡ್ಡ ಬದಲಾವಣೆಯ ಗಾಳಿ ಬೀಸತೊಡಗಿದೆ. ಈಗಾಗಲೇ ಸ್ವಿಂಗ್ ಮಾಂತ್ರಿಕ ಭುವನೇಶ್ವರ್ ಕುಮಾರ್ ನ್ಯೂಝಿಲೆಂಡ್ ಟಿ20 ಸರಣಿಗೆ ಆಯ್ಕೆಯಾಗಿರುವುದು ಅಭಿಮಾನಿಗಳಲ್ಲಿ ಹೊಸ ಭರವಸೆ ಮೂಡಿಸಿದೆ. ಇದೇ ಹಾದಿಯಲ್ಲಿ ಶಮಿ ಅವರಿಗೂ ರಾಷ್ಟ್ರೀಯ ತಂಡದ ಬಾಗಿಲು ಮುಚ್ಚಿಲ್ಲ ಎಂದು ರವಿಚಂದ್ರನ್ ಅಶ್ವಿನ್ ಅಭಿಪ್ರಾಯಪಟ್ಟಿದ್ದಾರೆ.

ಈ ಹಿಂದೆ ಕೇವಲ ಯುವ ಆಟಗಾರರಿಗೆ ಆದ್ಯತೆ ನೀಡಲಾಗುತ್ತಿತ್ತು. ಆದರೆ, ಜಸ್‌ಪ್ರೀತ್ ಬುಮ್ರಾ ಲಭ್ಯವಿಲ್ಲದ ಪಂದ್ಯಗಳಲ್ಲಿ ಭಾರತದ ಬೌಲಿಂಗ್ ವಿಭಾಗ ತೀರಾ ಸಾಧಾರಣವಾಗಿ ಕಾಣಿಸುತ್ತಿದೆ. ಕೇವಲ ಯುವಕರನ್ನೇ ನಂಬಿ ಕಣಕ್ಕಿಳಿಯುವುದು ಅಪಾಯಕಾರಿ ಎಂದು ಅರಿತಿರುವ ಹೊಸ ಆಯ್ಕೆ ಮಂಡಳಿ, ಮತ್ತೆ ಅನುಭವಕ್ಕೆ ಹೆಚ್ಚಿನ ಮನ್ನಣೆ ನೀಡಲು ನಿರ್ಧರಿಸಿದೆ.

ಭುವನೇಶ್ವರ್ ಕುಮಾರ್ ದೇಶಿ ಕ್ರಿಕೆಟ್ ಮತ್ತು ಐಪಿಎಲ್‌ನಲ್ಲಿ ಸ್ಥಿರ ಪ್ರದರ್ಶನ ನೀಡಿ ಕಂಬ್ಯಾಕ್ ಮಾಡಿದ್ದಾರೆ. ಇದನ್ನು ಉಲ್ಲೇಖಿಸಿರುವ ಅಶ್ವಿನ್, “ನ್ಯೂಝಿಲೆಂಡ್ ವಿರುದ್ಧ ಭುವಿ ಮಿಂಚಿದರೆ ಅವರನ್ನು ಏಕದಿನ ತಂಡಕ್ಕೂ ಪರಿಗಣಿಸಬಹುದು. ಅದೇ ರೀತಿ ಶಮಿ ತಮ್ಮ ಫಿಟ್‌ನೆಸ್ ಸಾಬೀತುಪಡಿಸಿದರೆ ಶೀಘ್ರದಲ್ಲೇ ತಂಡಕ್ಕೆ ಮರಳಲಿದ್ದಾರೆ” ಎಂದಿದ್ದಾರೆ.

ಮಾರ್ಚ್ 2025ರ ಚಾಂಪಿಯನ್ಸ್ ಟ್ರೋಫಿ ಫೈನಲ್ ನಂತರ ಶಮಿ ಭಾರತದ ಪರ ಆಡಿರಲಿಲ್ಲ. ಗಾಯದ ಸಮಸ್ಯೆ ಮತ್ತು ಆಯ್ಕೆ ಮಂಡಳಿಯೊಂದಿಗಿನ ಭಿನ್ನಾಭಿಪ್ರಾಯಗಳು ಅವರನ್ನು ದೂರವಿಟ್ಟಿದ್ದವು. ಆದರೆ 36 ವರ್ಷದ ಶಮಿ ದೇಶಿ ಕ್ರಿಕೆಟ್‌ನಲ್ಲಿ ಮತ್ತೆ ಲಯ ಕಂಡುಕೊಂಡಿದ್ದಾರೆ. 2027ರ ಏಕದಿನ ವಿಶ್ವಕಪ್ ದೃಷ್ಟಿಯಿಂದ ಬುಮ್ರಾ, ಶಮಿ, ಭುವಿ ಮತ್ತು ಸಿರಾಜ್ ಅವರನ್ನೊಳಗೊಂಡ ಬಲಿಷ್ಠ ವೇಗದ ಪಡೆಯನ್ನು ಕಟ್ಟಲು ಮ್ಯಾನೇಜ್‌ಮೆಂಟ್ ಯೋಜನೆ ರೂಪಿಸುತ್ತಿದೆ. ಒಟ್ಟಿನಲ್ಲಿ ಟೀಮ್ ಇಂಡಿಯಾದಲ್ಲಿ ಮತ್ತೆ ಅನುಭವಿಗಳ ರಾಜಯೋಗ ಆರಂಭವಾಗಿದ್ದು, ಶಮಿ ಮತ್ತೆ ನೀಲಿ ಜರ್ಸಿಯಲ್ಲಿ ಅಬ್ಬರಿಸುವುದನ್ನು ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ.

Must Read