October 8, 2026
Thursday, October 8, 2026

ಡೆಲ್ಲಿ ಕ್ಯಾಪಿಟಲ್ಸ್ ಪಡೆಗೆ ‘ದಾದಾ’ ಬಲ: ನೂತನ ಮುಖ್ಯ ಕೋಚ್ ಆಗಿ ಸೌರವ್ ಗಂಗೂಲಿ ನೇಮಕ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಐಪಿಎಲ್ 2026ರ ಆವೃತ್ತಿಯಲ್ಲಿ ಆರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ, ಮುಂಬರುವ ಸೀಸನ್‌ಗಾಗಿ ಭಾರಿ ಬದಲಾವಣೆಗೆ ಮುಂದಾಗಿದೆ. ಕಳೆದ ಎರಡು ವರ್ಷಗಳಿಂದ ತಂಡದ ಮುಖ್ಯ ತರಬೇತುದಾರರಾಗಿದ್ದ ಹೇಮಂಗ್ ಬದಾನಿ ಅವರನ್ನು ಹುದ್ದೆಯಿಂದ ಕೆಳಗಿಳಿಸಲಾಗಿದ್ದು, ಅವರ ಸ್ಥಾನಕ್ಕೆ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಅವರನ್ನು ನೂತನ ಮುಖ್ಯ ಕೋಚ್ ಆಗಿ ನೇಮಿಸಲಾಗಿದೆ. 2021ರ ಬಳಿಕ ಪ್ಲೇಆಫ್ ತಲುಪಲು ವಿಫಲವಾಗಿರುವ ಡೆಲ್ಲಿಯನ್ನು ಮತ್ತೆ ವಿಜೇತ ಹಾದಿಗೆ ತರುವುದೇ ಗಂಗೂಲಿ ಅವರ ಪ್ರಮುಖ ಆದ್ಯತೆಯಾಗಿದೆ.

ಗಂಗೂಲಿ ಅವರ ನೇಮಕದ ಬೆನ್ನಲ್ಲೇ ಟೀಮ್ ಇಂಡಿಯಾದ ಮತ್ತೊಬ್ಬ ದೈತ್ಯ ಆಟಗಾರ ಯುವರಾಜ್ ಸಿಂಗ್ ಕೂಡ ಬ್ಯಾಟಿಂಗ್ ತರಬೇತುದಾರರಾಗಿ ಡೆಲ್ಲಿ ಕ್ಯಾಪಿಟಲ್ಸ್ ಸೇರಿಕೊಳ್ಳುವ ಸಾಧ್ಯತೆಯಿದೆ. ಟೀಮ್ ಇಂಡಿಯಾಗೆ ಮಹತ್ವದ ಗೆಲುವುಗಳನ್ನು ತಂದಿಟ್ಟ ಈ ಇಬ್ಬರು ದಿಗ್ಗಜರ ಜುಗಲ್‌ಬಂದಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಆನೆಬಲ ತಂದುಕೊಡಲಿದೆ. “2019 ಮತ್ತು 2020ರಲ್ಲಿ ಡೆಲ್ಲಿ ಅತ್ಯಂತ ಬಲಿಷ್ಠ ತಂಡವಾಗಿತ್ತು. ಅದೇ ರೀತಿಯ ಯಶಸ್ಸನ್ನು ಮತ್ತೆ ಪುನರಾವರ್ತಿಸುವ ಸಂಪೂರ್ಣ ಸಾಮರ್ಥ್ಯ ನಮ್ಮ ತಂಡಕ್ಕಿದೆ” ಎಂದು ಗಂಗೂಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಪ್ರಸ್ತುತ ಡೆಲ್ಲಿ ಕ್ಯಾಪಿಟಲ್ಸ್ ಡ್ರೆಸ್ಸಿಂಗ್ ರೂಮ್‌ನಲ್ಲಿ ಅತ್ಯುತ್ತಮ ಪ್ರತಿಭೆಗಳಿದ್ದಾರೆ ಎಂದು ಗಂಗೂಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ತಂಡದಲ್ಲಿ ಕೆ.ಎಲ್ ರಾಹುಲ್, ಅಕ್ಷರ್ ಪಟೇಲ್, ಮಿಚೆಲ್ ಸ್ಟಾರ್ಕ್, ಡೇವಿಡ್ ಮಿಲ್ಲರ್ ಮತ್ತು ಟ್ರಿಸ್ಟನ್ ಸ್ಟಬ್ಸ್ ಅವರಂತಹ ವಿಶ್ವದರ್ಜೆಯ ಮ್ಯಾಚ್ ವಿನ್ನರ್‌ಗಳಿರುವುದು ತಂಡಕ್ಕೆ ದೊಡ್ಡ ಬೆನ್ನೆಲುಬಾಗಿದೆ. ಈ ಆಟಗಾರರ ಸೂಕ್ತ ಬಳಕೆ ಮತ್ತು ಸರಿಯಾದ ತಂತ್ರಗಾರಿಕೆಯ ಮೂಲಕ ಲೀಗ್‌ನ ಯಾವುದೇ ಬಲಿಷ್ಠ ತಂಡಕ್ಕೂ ಕಠಿಣ ಸವಾಲು ನೀಡಲು ಡೆಲ್ಲಿ ಸಜ್ಜಾಗಿದೆ.

ಕೇವಲ ಸಲಹೆಗಾರರಾಗಿ ಉಳಿಯದೆ ನೇರವಾಗಿ ಮೈದಾನಕ್ಕಿಳಿದು ತಂತ್ರ ರೂಪಿಸಲಿರುವ ‘ದಾದಾ’, 2027ರ ಐಪಿಎಲ್‌ನಲ್ಲಿ ಡೆಲ್ಲಿಗೆ ಮೊದಲ ಟ್ರೋಫಿ ಗೆದ್ದುಕೊಡುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

Must Read