May 8, 2026
Friday, May 8, 2026
spot_img

ಐಪಿಎಲ್ ಫೈನಲ್ ಬೆಂಗಳೂರಿನಿಂದ ಅಹಮದಾಬಾದ್ ಗೆ ಶಿಫ್ಟ್: ಬಿಸಿಸಿಐ ಕೊಟ್ಟ ಕಾರಣವೇನು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಐಪಿಎಲ್ ಟೂರ್ನಿಯು ಅದ್ದೂರಿಯಾಗಿ ಸಾಗುತ್ತಿದ್ದು, ಇನ್ನೇನು ಕೆಲವು ದಿನಗಳಲ್ಲಿ ಮುಕ್ತಾಯವಾಗಲಿದೆ. ಈಗಾಗಲೇ ಲೀಗ್ ಪಂದ್ಯಗಳು ಮುಗಿದು ಫೈನಲ್ ನತ್ತ ಸಾಗುತ್ತಿದೆ. ಇದರ ನಡುವೆ ಈ ಬಾರಿ ಫೈನಲ್ ಪಂದ್ಯದ ಆತಿಥ್ಯವನ್ನು ಬೆಂಗಳೂರಿನಿಂದ ಅಹಮದಾಬಾದ್​ನ ನರೇಂದ್ರ ಮೋದಿ ಮೈದಾನಕ್ಕೆ ಸ್ಥಳಾಂತರ ಮಾಡಲಾಗಿದೆ.

ಇತ್ತ ಬಿಸಿಸಿಐ ಈ ನಿರ್ಧಾರದಿಂದ ಬೆಂಗಳೂರು ವಹಿಸಲಿದೆ ಎಂದು ಕಾತುರದಿಂದ ಕಾಯುತ್ತಿದ್ದ ಕನ್ನಡಿಗರಿಗೆ ನಿರಾಸೆ ಮೂಡಿದೆ. ನಿಯಮದಂತೆ ಹಾಲಿ ಚಾಂಪಿಯನ್ ತವರು ಮೈದಾನ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಫೈನಲ್ ಪಂದ್ಯ ನಡೆಯಬೇಕು. ಆದರೆ ಬಿಸಿಸಿಐ ತನ್ನ ನಿರ್ಧಾರವನ್ನು ಬದಲಾಯಿಸಿದ್ದು, ಇದೀಗ ಈ ಕುರಿತು ಸೂಕ್ತ ಕಾರಣವನ್ನು ತಿಳಿಸಿದೆ.

ಈ ಬಗ್ಗೆ ಮಾತನಾಡಿದ ಬಿಸಿಸಿಐ ಕಾರ್ಯದರ್ಶಿ ದೇವಜಿತ್‌ ಸೈಕಿಯಾ, ಆರ್‌ಸಿಬಿ ತಂಡದ ತವರಿನಲ್ಲಿ ಐಪಿಎಲ್‌ ಫೈನಲ್ ಪಂದ್ಯ ನಡೆಸಬೇಕೆಂದು ಆರಂಭದಲ್ಲಿ ಬಿಸಿಸಿಐ ಬಯಸಿತ್ತು. ಆದರೆ, ಅಲ್ಲಿನ ಕರ್ನಾಟಕ ಕ್ರಿಕೆಟ್‌ ಸಂಸ್ಥೆ ಮತ್ತು ಅಧಿಕಾರಿಗಳ ಮಿತಿ ಮೀರಿದ ಕೆಲವು ಬೇಡಿಕೆಗಳು ನಿರ್ಧಾರ ಬದಲಾಯಿಸುವಂತೆ ಮಾಡಿತು ಎಂದು ತಿಳಿಸಿದರು.

ಐಪಿಎಲ್ ನಿಯಮ ಪ್ರಕಾರ, ಆತಿಥೇಯ ಸಂಸ್ಥೆಗೆ ಕೇವಲ 15 ಶೇಕಡಾ ಉಚಿತ ಟಿಕೆಟ್‌ಗಳನ್ನು ಮಾತ್ರ ನೀಡಬೇಕಿದೆ. ಆದರೆ ಐಪಿಎಲ್ ಲೀಗ್ ಪಂದ್ಯಗಳ ವೇಳೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ನಿಗದಿತ 15 ಶೇಕಡಾ ಮಿತಿಗಿಂತ ಹೆಚ್ಚಾಗಿ ಉಚಿತ ಟಿಕೆಟ್‌ಗಳನ್ನು ಕೇಳುತ್ತಿದೆ. ಈ ಹಿನ್ನೆಲೆ ನಾವು ಈ ಕುರಿತು ವಿವರಗಳನ್ನು ಕೇಳಿದ್ದೇವೆ. ಈ ಸಂಬಂಧ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯಿಂದ ಬಂದ ಉತ್ತರವನ್ನು ನೋಡಿ ನಾವು ಬೆಚ್ಚಿಬಿದ್ದೆವು ಎಂದು ತಿಳಿಸಿದರು.

ಸಂಸ್ಥೆಯು 15 ಶೇಕಡಾ ಉಚಿತ ಟಿಕೆಟ್‌ಗಳ ಜೊತೆಗೆ ಹೆಚ್ಚುವರಿ ದೊಡ್ಡ ಪ್ರಮಾಣದ ಟಿಕೆಟ್‌ಗಳನ್ನು ಕೇಳಿದ್ದರು. ಅದರಲ್ಲೂ ಅಲ್ಲಿನ ಸ್ಥಳೀಯ ಶಾಸಕರು, ವಿಧಾನ ಪರಿಷತ್ ಸದಸ್ಯರು ಹಾಗೂ ಕರ್ನಾಟಕ ಸರ್ಕಾರಕ್ಕೆಂದು 700 ಉಚಿತ ಟಿಕೆಟ್‌ಗಳನ್ನು ಬೇಡಿಕೆ ಇಟ್ಟಿದ್ದರು. ಈ ಮೂಲಕ 10,000 ಹೆಚ್ಚುವರಿ ಟಿಕೆಟ್‌ಗಳನ್ನು ಕೇಳಿದ್ದಾರೆ. ಇದು ಐಪಿಎಲ್ ನಿಯಮಾವಳಿಗಳ ಉಲ್ಲಂಘನೆಯಾಗಿದೆ. ಹೆಚ್ಚು ಟಿಕೆಟ್‌ಗಳನ್ನು ನೀಡಲು ಸಾಧ್ಯವಿಲ್ಲ. ಆದ್ದರಿಂದ ಕರ್ನಾಟಕದಿಂದ ಪಂದ್ಯಗಳನ್ನು ಸ್ಥಳಾಂತರಿಸುವ ನಿರ್ಧಾರ ಕೈಗೊಳ್ಳಬೇಕಾಯಿತು ಎಂದು ಹೇಳಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !