ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಯೋಧ್ಯೆಯ ಭವ್ಯ ಶ್ರೀರಾಮ ಮಂದಿರಕ್ಕೆ ಕೋಟ್ಯಂತರ ಭಕ್ತರು ಶ್ರದ್ಧಾ ಭಕ್ತಿಯಿಂದ ಸಮರ್ಪಿಸಿದ್ದ ಕಾಣಿಕೆ ಮತ್ತು ದೇಣಿಗೆ ಹಣವನ್ನು ಲೂಟಿ ಮಾಡಿರುವ ಭೀಕರ ಹಗರಣವೊಂದು ಬೆಳಕಿಗೆ ಬಂದಿದೆ. ರಾಮಮಂದಿರದ ಆವರಣದ ಶೌಚಾಲಯದಲ್ಲಿ ಕದ್ದ ಹಣದ ರಾಶಿ ಪತ್ತೆಯಾಗಿದ್ದು, ಇದರೊಂದಿಗೆ ಭಕ್ತರು ರಾಮಲಲ್ಲಾಗೆ ಅರ್ಪಿಸಿದ್ದ ಚಿನ್ನದ ಆಭರಣಗಳೂ ಸಹ ಕಳವಾಗಿರುವ ಆಘಾತಕಾರಿ ಮಾಹಿತಿ ತನಿಖೆಯಿಂದ ಬಯಲಾಗಿದೆ.
ಶೌಚಾಲಯದಲ್ಲಿ ಸಿಕ್ಕಿತು ಕದ್ದ ಹಣದ ರಾಶಿ!
ಮಂದಿರದ ಭದ್ರತಾ ಸಿಬ್ಬಂದಿ ಮತ್ತು ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯ ವೇಳೆ, ಮಂದಿರದ ಸಂಕೀರ್ಣದ ಒಳಗಿರುವ ಶೌಚಾಲಯದಲ್ಲಿ ಕಳ್ಳತನ ಮಾಡಿ ಬಚ್ಚಿಡಲಾಗಿದ್ದ ಲಕ್ಷಾಂತರ ರೂ. ನಗದು ಪತ್ತೆಯಾಗಿದೆ. ಬ್ಯಾಂಕ್‌ಗೆ ಜಮಾ ಮಾಡುವ ಮುನ್ನವೇ ಕಾಣಿಕೆ ಪೆಟ್ಟಿಗೆಯಿಂದ ಹಣವನ್ನು ವ್ಯವಸ್ಥಿತವಾಗಿ ಕದ್ದು, ಸಾಗಿಸಲು ಅನುಕೂಲವಾಗುವಂತೆ ಶೌಚಾಲಯದ ರಹಸ್ಯ ಜಾಗದಲ್ಲಿ ಬಚ್ಚಿಡಲಾಗಿತ್ತು ಎಂದು ತನಿಖಾ ಮೂಲಗಳು ತಿಳಿಸಿವೆ.
ರಾಮಲಲ್ಲಾನ ಚಿನ್ನದ ಕಾಣಿಕೆಯೂ ಕಳವು
ಕೇವಲ ನಗದು ಮಾತ್ರವಲ್ಲದೆ, ದೇಶ-ವಿದೇಶಗಳ ಭಕ್ತರು ಬಾಲರಾಮನಿಗೆ ಭಕ್ತಿಯಿಂದ ಅರ್ಪಿಸಿದ್ದ ಚಿನ್ನದ ನಾಣ್ಯಗಳು, ಚೈನುಗಳು ಮತ್ತು ಇತರೆ ಬೆಲೆಬಾಳುವ ಆಭರಣಗಳೂ ಸಹ ನಾಪತ್ತೆಯಾಗಿವೆ. ಮಂದಿರದ ಒಳಗೆ ಅತ್ಯಂತ ಬಿಗಿ ಭದ್ರತೆ ಇದ್ದಾಗ್ಯೂ, ಇಷ್ಟು ದೊಡ್ಡ ಮಟ್ಟದ ಕಳ್ಳತನ ನಡೆದಿರುವುದು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಆಡಳಿತ ಮಂಡಳಿಯನ್ನು ತೀವ್ರ ಆತಂಕಕ್ಕೆ ತಳ್ಳಿದೆ.
ಇದನ್ನೂ ಓದಿ:
ತನಿಖೆಯಲ್ಲಿ ಸಿಕ್ಕಿಬಿದ್ದ ಆಂತರಿಕ ಸಿಬ್ಬಂದಿ?
ಮಂದಿರದ ಕಾಣಿಕೆ ಎಣಿಕೆ ಪ್ರಕ್ರಿಯೆಯಲ್ಲಿ ಭಾಗಿಯಾಗುತ್ತಿದ್ದ ನೌಕರರು ಹಾಗೂ ಸಿಸಿಟಿವಿ ಕಣ್ಗಾವಲಿನಿಂದ ತಪ್ಪಿಸಿಕೊಳ್ಳಲು ಶೌಚಾಲಯವನ್ನು ಬಳಸಿಕೊಂಡಿರುವುದು ಪ್ರಾಥಮಿಕ ತನಿಖೆಯಿಂದ ದೃಢಪಟ್ಟಿದೆ. ಮಂದಿರದ ನಂಬಿಕಸ್ಥ ನೌಕರರೇ ಈ ಲೂಟಿ ಜಾಲದ ಹಿಂದೆ ಇರುವ ಶಂಕೆ ವ್ಯಕ್ತವಾಗಿದ್ದು, ಈಗಾಗಲೇ ಹಲವು ಶಂಕಿತರನ್ನು ಪೊಲೀಸರು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.



