June 26, 2026
Friday, June 26, 2026
spot_img

2047ರ ವೇಳೆಗೆ ಭಾರತ ಕಂಪ್ಲೀಟ್ ಡ್ರಗ್ಸ್ ಫ್ರೀ: ಕೇಂದ್ರ ಗೃಹ ಸಚಿವರಿಂದ ಹೊಸ ‘ವಿಷನ್ ಡಾಕ್ಯುಮೆಂಟ್’ ಬಿಡುಗಡೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಭಾರತವನ್ನು ಮಾದಕ ದ್ರವ್ಯ ಮುಕ್ತ ರಾಷ್ಟ್ರವನ್ನಾಗಿ ಮಾಡಲು ಕೇಂದ್ರ ಸರ್ಕಾರವು ಬೃಹತ್ ಆ್ಯಕ್ಷನ್ ಪ್ಲ್ಯಾನ್ ಸಿದ್ಧಪಡಿಸಿದೆ. ದೇಶದ ಯುವ ಸಮೂಹವನ್ನು ಬಲಿ ತೆಗೆದುಕೊಳ್ಳುತ್ತಿರುವ ಡ್ರಗ್ಸ್ ಜಾಲವನ್ನು ಬೇರುಸಹಿತ ಕಿತ್ತೆಸೆಯಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಮುಂದಿನ 3 ವರ್ಷಗಳ ಕಾಲಾವಧಿಯ ಅತ್ಯಂತ ಪ್ರಮುಖ ‘ವಿಷನ್ ಡಾಕ್ಯುಮೆಂಟ್’ ಅನ್ನು ಅಧಿಕೃತವಾಗಿ ಬಿಡುಗಡೆ ಮಾಡಿದ್ದಾರೆ.

2047ರ ವೇಳೆಗೆ ಸಂಪೂರ್ಣ ‘ಮಾದಕ ಮುಕ್ತ ಭಾರತ’

ವಿಷನ್ ಡಾಕ್ಯುಮೆಂಟ್ ಬಿಡುಗಡೆ ಮಾಡಿ ಮಾತನಾಡಿದ ಗೃಹ ಸಚಿವ ಅಮಿತ್ ಶಾ, “ಭಾರತದ ಸ್ವಾತಂತ್ರ್ಯದ ಶತಮಾನೋತ್ಸವದ (2047) ವೇಳೆಗೆ ದೇಶವನ್ನು ಸಂಪೂರ್ಣವಾಗಿ ಡ್ರಗ್ಸ್ ಮುಕ್ತಗೊಳಿಸುವುದು ಪ್ರಧಾನಿ ನರೇಂದ್ರ ಮೋದಿ ಸಂಕಲ್ಪವಾಗಿದೆ. ಈ ಗುರಿಯನ್ನು ತಲುಪಲು ಮುಂದಿನ 3 ವರ್ಷಗಳು ಅತ್ಯಂತ ನಿರ್ಣಾಯಕವಾಗಿದ್ದು, ಹೊಸ ವಿಷನ್ ಡಾಕ್ಯುಮೆಂಟ್ ಅದಕ್ಕೆ ದಿಕ್ಸೂಚಿಯಾಗಲಿದೆ. ಡ್ರಗ್ಸ್ ದಂಧೆಯಲ್ಲಿ ತೊಡಗಿರುವವರ ವಿರುದ್ಧ ಸರ್ಕಾರ ಶೂನ್ಯ ಸಹಿಷ್ಣುತೆ ನೀತಿಯನ್ನು ಅನುಸರಿಸಲಿದೆ” ಎಂದು ಖಡಕ್ ಸಂದೇಶ ನೀಡಿದ್ದಾರೆ.

ವಿಷನ್ ಡಾಕ್ಯುಮೆಂಟ್‌ನ ಪ್ರಮುಖ ಅಂಶಗಳು:

ಡ್ರಗ್ಸ್ ಸಾಗಾಟದ ಅಂತಾರಾಷ್ಟ್ರೀಯ ಜಾಲ ಮತ್ತು ಡಾರ್ಕ್ ವೆಬ್ ಮೂಲಕ ನಡೆಯುವ ಮಾದಕ ವಸ್ತುಗಳ ವ್ಯವಹಾರವನ್ನು ತಾಂತ್ರಿಕವಾಗಿ ಪತ್ತೆಹಚ್ಚಿ ಧ್ವಂಸಗೊಳಿಸುವುದು. ಡ್ರಗ್ಸ್ ಪತ್ತೆಗಾಗಿ ಇರುವ ‘ಎನ್‌ಕಾರ್ಡ್’ ವ್ಯವಸ್ಥೆಯನ್ನು ತಳಮಟ್ಟದವರೆಗೂ ವಿಸ್ತರಿಸಿ, ಎಲ್ಲಾ ರಾಜ್ಯಗಳ ಪೊಲೀಸ್ ಇಲಾಖೆ ಹಾಗೂ ಕೇಂದ್ರ ಸಂಸ್ಥೆಗಳ ನಡುವೆ ಹಗಲಿರುಳು ಮಾಹಿತಿ ವಿನಿಮಯ ಮಾಡಿಕೊಳ್ಳುವುದು.

ಸಮುದ್ರ ಮಾರ್ಗ ಹಾಗೂ ಗಡಿ ಭಾಗಗಳ ಮೂಲಕ ದೇಶದೊಳಗೆ ಡ್ರಗ್ಸ್ ನುಸುಳದಂತೆ ಕರಾವಳಿ ಭದ್ರತಾ ಪಡೆ ಮತ್ತು ಬಿಎಸ್ಎಫ್ ತನಿಖೆಯನ್ನು ತೀವ್ರಗೊಳಿಸುವುದು. ಕೇವಲ ದಂಧೆಕೋರರನ್ನು ಹಿಡಿಯುವುದಷ್ಟೇ ಅಲ್ಲದೆ, ಡ್ರಗ್ಸ್ ದಾಸರಾಗಿರುವ ಯುವಕರಿಗೆ ಸೂಕ್ತ ಕೌನ್ಸೆಲಿಂಗ್ ಮತ್ತು ಪುನರ್ವಸತಿ ಕೇಂದ್ರಗಳ ಮೂಲಕ ಹೊಸ ಬದುಕು ನೀಡುವುದು.

ಡ್ರಗ್ಸ್ ಹಣ ಮತ್ತು ದೇಶದ್ರೋಹಿ ಜಾಲಕ್ಕೆ ಕತ್ತರಿ

ಮಾದಕ ದ್ರವ್ಯಗಳ ಮಾರಾಟದಿಂದ ಬರುವ ಹಣವು ದೇಶವಿರೋಧಿ ಕೃತ್ಯಗಳಿಗೆ ಹಾಗೂ ಭಯೋತ್ಪಾದನೆಗೆ ಬಳಕೆಯಾಗುತ್ತಿರುವುದನ್ನು ಅಮಿತ್ ಶಾ ತೀವ್ರವಾಗಿ ಖಂಡಿಸಿದರು. ಡ್ರಗ್ಸ್ ದಂಧೆಕೋರರ ಬ್ಯಾಂಕ್ ಖಾತೆಗಳು ಮತ್ತು ಬೇನಾಮಿ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಪ್ರಕ್ರಿಯೆಯನ್ನು ಇನ್ನಷ್ಟು ಬಿಗಿಗೊಳಿಸಲಾಗುವುದು. ಕಳ್ಳಸಾಗಣೆದಾರರು ಎಷ್ಟೇ ಪ್ರಭಾವಿಯಾಗಿದ್ದರೂ ಕಾನೂನಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಅವರು ಎಚ್ಚರಿಸಿದ್ದಾರೆ.

ಇದನ್ನೂ ಓದಿ;

ರಾಜ್ಯ ಸರ್ಕಾರಗಳಿಗೆ ಜಂಟಿ ಕಾರ್ಯಾಚರಣೆಯ ಕರೆ

ಈ ಮಾಸ್ಟರ್ ಪ್ಲ್ಯಾನ್ ಯಶಸ್ವಿಯಾಗಲು ಪಕ್ಷಾತೀತವಾಗಿ ಎಲ್ಲಾ ರಾಜ್ಯಗಳು ಕೇಂದ್ರದೊಂದಿಗೆ ಕೈಜೋಡಿಸಬೇಕು ಎಂದು ಗೃಹ ಸಚಿವರು ಕರೆ ನೀಡಿದ್ದಾರೆ. ಪ್ರತಿಯೊಂದು ರಾಜ್ಯದಲ್ಲೂ ಪ್ರತ್ಯೇಕ ಆಂಟಿ-ನಾರ್ಕೋಟಿಕ್ಸ್ ಟಾಸ್ಕ್ ಫೋರ್ಸ್ (ANTF) ರಚಿಸಿ, ಜಿಲ್ಲಾ ಮಟ್ಟದಲ್ಲೂ ಮಾದಕ ದ್ರವ್ಯ ವಿರೋಧಿ ಜಾಗೃತಿ ಮೂಡಿಸಬೇಕು ಎಂದು ವಿಷನ್ ಡಾಕ್ಯುಮೆಂಟ್‌ನಲ್ಲಿ ಸೂಚಿಸಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !