ಹೊಸದಿಗಂತ ಡಿಜಿಟಲ್ ಡೆಸ್ಕ್:
ನ್ಯಾಷನಲ್ ಕ್ರೈಮ್ ರೆಕಾರ್ಡ್ಸ್ ಬ್ಯೂರೋ (NCRB) ಬಿಡುಗಡೆ ಮಾಡಿರುವ 2024ರ ವರದಿಯ ಪ್ರಕಾರ, ಮಹಿಳೆಯರ ಮೇಲಿನ ಅಪರಾಧ ಪ್ರಕರಣಗಳಲ್ಲಿ ದೇಶದ 19 ಮೆಟ್ರೋಪಾಲಿಟನ್ ನಗರಗಳ ಪೈಕಿಯಲ್ಲಿ ಬೆಂಗಳೂರು ಮೂರನೇ ಸ್ಥಾನದಲ್ಲಿದೆ ಎಂಬ ಆಘಾತಕಾರಿ ಮಾಹಿತಿಯನ್ನು ನೀಡಿದೆ.
ಮಹಿಳೆಯರ ಮೇಲಿನ ಅಪರಾಧಗಳನ್ನು ತಡೆಯಲು ಪೊಲೀಸರು ಹಲವು ಕ್ರಮಗಳನ್ನು ಕೈಗೊಂಡಿದ್ದರೂ, ದೆಹಲಿ ಮತ್ತು ಮುಂಬೈ ನಂತರ ಬೆಂಗಳೂರು ಅತಿ ಹೆಚ್ಚು ಅಪರಾಧ ನಡೆಯುವ ನಗರವಾಗಿ ಹೊರಹೊಮ್ಮಿದೆ.
ವರದಿಯ ಪ್ರಕಾರ ನಗರದಲ್ಲಿ 168 ಅತ್ಯಾಚಾರ ಪ್ರಕರಣಗಳು, 180 ಲೈಂಗಿಕ ಕಿರುಕುಳದ ಪ್ರಕರಣಗಳು 897 ಮಹಿಳೆಯರ ಮಾನಭಂಗಕ್ಕೆ ಯತ್ನಿಸುವ ಪ್ರಕರಣಗಳು ಹಾಗೂ 25 ವರದಕಿಣೆ ಕಿರುಕುಳದ ಸಾವಿನ ಬಗ್ಗೆ ಪ್ರಕರಣಗಳು ದಾಖಲಾಗಿವೆ. 2024ರಲ್ಲಿ ಒಟ್ಟು 4,748 ಪ್ರಕರಣಗಳು ದಾಖಲಾಗಿದ್ದು, ಇದು 2023ಕ್ಕೆ (4,870) ಹೋಲಿಸಿದರೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ.
ಈ ವರದಿಯ ಬಗ್ಗೆ ಅಖಿಲ ಭಾರತ ಪ್ರಜಾಸತ್ತಾತ್ಮಕ ಮಹಿಳಾ ಸಂಘಟನೆಯ (AIDWA) ಹಿರಿಯ ನಾಯಕಿ ವಿಮಲಾ ಕೆ.ಎಸ್. ಪ್ರತಿಕ್ರಿಯೇ ನೀಡಿ, ಈ ವರದಿಯನ್ನು ನಂಬಲು ಅಸಾಧ್ಯ, ಪತ್ರಿಕೆಗಳಲ್ಲಿ ಪ್ರತಿದಿನ ಅತ್ಯಾಚಾರ, ಕಿರುಕುಳದ ಸುದ್ದಿಗಳು ಹೆಚ್ಚಾಗುತ್ತಲೇ ಇವೆ. ಆದರೆ ವರದಿಯಲ್ಲಿ ಪ್ರಕರಣಗಳು ಕಡಿಮೆಯಾಗಿವೆ ಎಂದು ತೋರಿಸಿರುವುದು ಅನುಮಾನಾಸ್ಪದವಾಗಿದೆ. ಅಪರಾಧಗಳು ದಾಖಲಾಗುತ್ತಿಲ್ಲವೇ ಅಥವಾ ಮುಚ್ಚಿ ಹಾಕಲಾಗುತ್ತಿದೆಯೇ ಎಂಬ ಬಗ್ಗೆ ವಿವರವಾದ ಅಧ್ಯಯನದ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.



