ಹೊಸದಿಗಂತ ಡಿಜಿಟಲ್ ಡೆಸ್ಕ್:
ಟೀಮ್ ಇಂಡಿಯಾದ ಮಾಜಿ ನಾಯಕ ಹಾಗೂ ಯಶಸ್ವಿ ಉದ್ಯಮಿ ಮಹೇಂದ್ರ ಸಿಂಗ್ ಧೋನಿ ಅವರು ಕೇವಲ ಕ್ರಿಕೆಟ್ ಮೈದಾನದಲ್ಲಿ ಮಾತ್ರವಲ್ಲದೆ, ತೆರಿಗೆ ಪಾವತಿಯಲ್ಲೂ ಮುಂಚೂಣಿಯಲ್ಲಿದ್ದಾರೆ. 2025-26ರ ಹಣಕಾಸು ವರ್ಷದಲ್ಲಿ ಜಾರ್ಖಂಡ್ ಮತ್ತು ಬಿಹಾರ ರಾಜ್ಯಗಳ ಪೈಕಿ ವೈಯಕ್ತಿಕವಾಗಿ ಅತಿಹೆಚ್ಚು ಆದಾಯ ತೆರಿಗೆ ಪಾವತಿಸಿದವರ ಪಟ್ಟಿಯಲ್ಲಿ ಧೋನಿ ಅಗ್ರಸ್ಥಾನ ಪಡೆದಿದ್ದಾರೆ.
ಮನಿಕಂಟ್ರೋಲ್ ವರದಿ ಪ್ರಕಾರ, ಹಿಂದುಳಿದ ರಾಜ್ಯಗಳೆಂದು ಪರಿಗಣಿಸಲ್ಪಟ್ಟಿರುವ ಜಾರ್ಖಂಡ್ ಮತ್ತು ಬಿಹಾರದಲ್ಲಿ 2025-26ನೇ ಸಾಲಿನಲ್ಲಿ ಒಟ್ಟು 20,000 ಕೋಟಿ ರೂಪಾಯಿ ಆದಾಯ ತೆರಿಗೆ ಸಂಗ್ರಹವಾಗಿದೆ. ಇದರಲ್ಲಿ ಜಾರ್ಖಂಡ್‌ನ ಪಾಲು 12,000 ಕೋಟಿ ರೂ.ಗಳಾಗಿದ್ದರೆ, ಬಿಹಾರದಿಂದ 8,000 ಕೋಟಿ ರೂ. ಟ್ಯಾಕ್ಸ್ ಸಂಗ್ರಹವಾಗಿದೆ. ಇಡೀ ವಲಯದಲ್ಲಿ ಧೋನಿ ಅವರೇ ಅತಿಹೆಚ್ಚು ತೆರಿಗೆ ಕಟ್ಟಿದ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ.
ಪ್ರಸ್ತುತ ಬಿಹಾರ ಮತ್ತು ಜಾರ್ಖಂಡ್‌ನಲ್ಲಿ ಸುಮಾರು 5.5 ಕೋಟಿ ಪ್ಯಾನ್ ಕಾರ್ಡ್ ಬಳಕೆದಾರರಿದ್ದಾರೆ. ಆದರೆ, ಇವರಲ್ಲಿ ಕೇವಲ 40 ಲಕ್ಷ ಮಂದಿ ಮಾತ್ರ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುತ್ತಿದ್ದಾರೆ. ಈ 40 ಲಕ್ಷ ಜನರಲ್ಲಿ ಎಂ.ಎಸ್. ಧೋನಿ ಅವರೇ ಅತಿಹೆಚ್ಚು ಮೊತ್ತದ ತೆರಿಗೆ ಪಾವತಿಸಿರುವುದು ಗಮನಾರ್ಹ. ಧೋನಿ ಪಾವತಿಸಿದ ನಿಖರ ಮೊತ್ತವನ್ನು ಇಲಾಖೆ ಬಹಿರಂಗಪಡಿಸದಿದ್ದರೂ, ಕಳೆದ ಬಾರಿಯಂತೆ ಈ ವರ್ಷವೂ ಅವರು ದಾಖಲೆ ಬರೆದಿದ್ದಾರೆ.
ವೈಯಕ್ತಿಕವಾಗಿ ಧೋನಿ ನಂಬರ್ ಒನ್ ಸ್ಥಾನದಲ್ಲಿದ್ದರೆ, ಕಾರ್ಪೊರೇಟ್ ವಲಯದಲ್ಲಿ ಸೆಂಟ್ರಲ್ ಕೋಲ್ ಫೀಲ್ಡ್ಸ್ ಲಿಮಿಟೆಡ್, ಭಾರತ್ ಕೋಕಿಂಗ್ ಕೋಲ್ ಲಿಮಿಟೆಡ್ ಮತ್ತು ಸಿಎಂಪಿಡಿಐ ಕಂಪನಿಗಳು ಅತಿಹೆಚ್ಚು ತೆರಿಗೆ ಪಾವತಿಸಿವೆ.
ರಾಷ್ಟ್ರಮಟ್ಟದಲ್ಲಿ ಆದಾಯ ತೆರಿಗೆ ಸಂಗ್ರಹದಲ್ಲಿ ಮಹಾರಾಷ್ಟ್ರ ಅಗ್ರಸ್ಥಾನದಲ್ಲಿದ್ದರೆ, ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ವಿಶೇಷವಾಗಿ ಕರ್ನಾಟಕ ರಾಜ್ಯವು 2025-26ರಲ್ಲಿ ಅಂದಾಜು 2 ಲಕ್ಷ ಕೋಟಿ ರೂಪಾಯಿ ತೆರಿಗೆ ಸಂಗ್ರಹಿಸುವ ನಿರೀಕ್ಷೆಯಲ್ಲಿದೆ. ಬೆಂಗಳೂರಿನ ಐಟಿ ಮತ್ತು ಸ್ಟಾರ್ಟಪ್ ಉದ್ಯಮಗಳ ಬೆಳವಣಿಗೆಯು ಕರ್ನಾಟಕವನ್ನು ಈ ಪಟ್ಟಿಯಲ್ಲಿ ಮುಂಚೂಣಿಗೆ ತಂದಿದೆ.
ಕ್ರಿಕೆಟ್‌ನಿಂದ ನಿವೃತ್ತರಾಗಿದ್ದರೂ ಐಪಿಎಲ್ ಹಾಗೂ ವಿವಿಧ ಬ್ಯುಸಿನೆಸ್ ಮತ್ತು ಜಾಹೀರಾತುಗಳ ಮೂಲಕ ಧೋನಿ ದೊಡ್ಡ ಮಟ್ಟದ ಆದಾಯ ಗಳಿಸುತ್ತಿದ್ದು, ಪ್ರಾಮಾಣಿಕವಾಗಿ ತೆರಿಗೆ ಪಾವತಿಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.



